ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಸಹಾಯಕತೆ, ಹತಾಶೆಗೆ ಕನಿಕರ ಮೂಡುತ್ತಿದೆ: ದಿನೇಶ್ ಅಮೀನ್
ಉಡುಪಿ: ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಉಡುಪಿ ಜಿಲ್ಲೆಯ ಜನತೆ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಗೋ ಬ್ಯಾಕ್ ಅಭಿಯಾನ ಮಾಡುತ್ತಿದರೂ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಉಸ್ತುವಾರಿ ಸಚಿವರ ಓಲೈಕೆಗಾಗಿ ಉಡುಪಿ ಶಾಸಕರ ವಿರುದ್ಧ ಹತಾಶ ಹೇಳಿಕೆ ನೀಡುವ ಅಸಹಾಯಕತೆಗೆ ಕನಿಕರ ಮೂಡುತ್ತಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಜನತೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡದ ಉಸ್ತುವಾರಿ ಸಚಿವರು, ಇದೀಗ ಕಾಟಾಚಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಅಧಿಕಾರಿಗಳ ಜೊತೆ ಹಾನಿಯ ಪರಿಶೀಲನೆ ಮಾಡುವ ಪ್ರಹಸನವನ್ನು ಜಿಲ್ಲೆಯ ಜನತೆಯ ಧ್ವನಿಯಾಗಿ ಶಾಸಕರು ದಿಟ್ಟವಾಗಿ ಖಂಡಿಸಿ ಟೀಕೆ ಮಾಡಿದ್ದಾರೆ.
ಉಸ್ತುವಾರಿ ಸಚಿವರಾಗಿ ಸುಮಾರು 14 ತಿಂಗಳು ಕಳೆದರೂ ಕೇವಲ ಒಂದೇ ಒಂದು ಬಾರಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಉಡುಪಿ ಪರ್ಯಾಯ 10 ಕೋಟಿ, ಕಡಲ್ಕೊರೆತ 5 ಕೋಟಿ ಸಹಿತ ಉಸ್ತುವಾರಿ ಸಚಿವರ ಅನುದಾನ ಬಿಡುಗಡೆಯ ಘೋಷಣೆ ಇನ್ನೂ ಮರೀಚಿಕೆಯಾಗಿದೆ. ಪ್ರತಿ 3 ತಿಂಗಳಿಗೆ ಒಮ್ಮೆಯಾದರೂ ಕೆಡಿಪಿ ಸಭೆ ನಡೆಸಲು ಮರೆತಿರುವ ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನೆ ಮಾಡಲಿ.
ಇತ್ತೀಚೆಗೆ ಬೈಂದೂರಿನ ಚುಕ್ಕಿ ಉತ್ಪನ್ನ ಘಟಕದ ಉದ್ಘಾಟನೆಯ ಖಾಸಗಿ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಜಿಲ್ಲೆಯ ಜನರ ಕಷ್ಟ ಆಲಿಸಲು ಮಾತ್ರ ಪುರುಸೊತ್ತು ಇರಲಿಲ್ಲ.
ಸ್ವಪಕ್ಷದ ಸಚಿವರ ಕಾರ್ಯವೈಖರಿಯ ವೈಫಲ್ಯತೆಗಳ ಬಗ್ಗೆ ಒಮ್ಮೆಯೂ ದನಿ ಎತ್ತದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಗ ಒಮ್ಮೆಲೇ ಜ್ಞಾನೋದಯವಾದಂತೆ ಪ್ರಚಾರಕ್ಕಾಗಿ ಶಾಸಕರ ವಿರುದ್ಧ ಹೇಳಿಕೆ ನೀಡಿದ್ದಾರೆ.
ಸರಕಾರ ಹಾಗೂ ಉಸ್ತುವಾರಿ ಸಚಿವರವೈಫಲ್ಯಗಳನ್ನು ಜನತೆಯ ಮುಂದೆ ತರುವುದು ಶಾಸಕರ ಜವಾಬ್ದಾರಿ ಅದನ್ನು ಶಾಸಕರು ಸಮರ್ಥವಾಗಿ ಮಾಡುತ್ತಿದ್ದು, ಈ ಬಗ್ಗೆ ದಾಖಲೆಯೊಂದಿಗೆ ಬಹಿರಂಗ ಚರ್ಚೆಗೆ ಶಾಸಕರು ಸಿದ್ಧರಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಜನವಿರೋಧಿ ನೀತಿಗೆ ಉಡುಪಿ ನಗರಸಭೆ ಪೆರಂಪಳ್ಳಿ ವಾರ್ಡ್, ಲೋಕಸಭೆ ಚುನಾವಣೆಯ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಸುವ ಮೂಲಕ ಜನತೆ ತಕ್ಕ ಉತ್ತರ ನೀಡಿದ್ದಾರೆ ಇನ್ನಾದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈ ಸಾಲು ಸಾಲು ಸೋಲಿನಿಂದ ಪಾಠ ಕಲಿಯಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.