‘ಕುಮ್ಕಿ ಭೂಮಿ’ ಮಂಜೂರಿಲ್ಲ, ಬಡವರ ಮನೆ ತೆರವೂ ಇಲ್ಲ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಕಾನೂನು ರೀತಿಯಲ್ಲಿ ‘ಕುಮ್ಕಿ ಭೂಮಿ’ ಮಂಜೂರು ಮಾಡಲು ಸಾಧ್ಯವಿಲ್ಲ. ಆದರೆ, ಕುಮ್ಕಿ ಜಮೀನಿನಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯನ್ನೂ ಮಾಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸಭಾ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಯಾರಿಗೂ ಮಂಜೂರು ಮಾಡುವುದು ಸಾಧ್ಯವಿಲ್ಲ. ಆಗುತ್ತೆ, ನೋಡೋಣ ಎಂದು ಜನರಿಗೆ ತಪ್ಪು ಮಾಹಿತಿ ಅಥವಾ ತಪ್ಪು ನಿರೀಕ್ಷೆಗಳನ್ನು ನೀಡಲು ನಾವು ಸಿದ್ದರಿಲ್ಲ. ಕಹಿಯಾದರೂ ಸತ್ಯವನ್ನು ಹೇಳಲೇಬೇಕು. ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದರು.

ಕುಮ್ಕಿ ಜಮೀನನ್ನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಸಂಪುಟ ಉಪಸಮಿತಿ ಸಭೆ ರಚನೆ ಮಾಡಿತ್ತು. ಈ ಸಭೆ ದೀರ್ಘ ಚರ್ಚೆ ನಡೆಸಿದ ನಂತರ ಕುಮ್ಕಿ ಜಮೀನನ್ನು ಮಂಜೂರು ಮಾಡುವುದು ಸಾಧ್ಯವಿಲ್ಲ ಎಂದು ಈ ವಿಚಾರವನ್ನೇ ಕೈಬಿಟ್ಟಿತ್ತು ಎಂಬ ಮಾಹಿತಿಯನ್ನು ಅವರು ಸದನಕ್ಕೆ ನೀಡಿದರು.

ಅಲ್ಲದೆ, ಕೆಎಲ್‍ಆರ್ ಆಕ್ಟ್ ರೂಲ್ಸ್- 79ರ ಪ್ರಕಾರ ಕುಮ್ಕಿ ಪ್ರದೇಶವನ್ನು ಉಪಯೋಗ ಮಾಡಿಕೊಳ್ಳುವ ಹಕ್ಕನ್ನು ಜನರಿಗೆ ನೀಡಲಾಗಿದೆ. ಜಮೀನಿಗೆ ಹೊಂದಿಕೊಂಡಿರುವ ಕಾಡಿನ ಭಾಗದ ಉಪ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಆದರೆ, ಆ ಜಾಗಗಳನ್ನು ಮಂಜೂರು ಮಾಡಲಾಗುವುದಿಲ್ಲ ಎಂಬ ಅಂಶ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಕುಮ್ಕಿ ಜಮೀನನ್ನು ಕನಿಷ್ಠ ಭೋಗ್ಯಕ್ಕೆ ನೀಡುವುದಾದರೂ ಸಾಧ್ಯವಿದೆಯಾ ಎಂಬ ಕುರಿತು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದರು.

ಇದಕ್ಕೂ ಮುನ್ನ ಸುನೀಲ್ ಕುಮಾರ್ ಪ್ರಸ್ತಾಪಿಸಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಮೀನಿನ ಸಮಸ್ಯೆ ಉಲ್ಬಣಿಸಿದ್ದು, ಸ್ವಾಧೀನದಲ್ಲಿರುವ ಕುಮ್ಕಿ ಜಮೀನಿನನ್ನು ಕಲಂ ನಮೂನೆ 53-57 ಹಾಗು 93 ಸಿಸಿ ಪ್ರಕಾರ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!