ಸಮುದ್ರ ತೀರದಲ್ಲಿ ಚಿಕ್ಕಿ ತಿಂದಂತಾದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಾಕೃತಿಕ ವಿಕೋಪ ವೀಕ್ಷಣೆ: ಯಶ್ಪಾಲ್ ಸುವರ್ಣ

ಉಡುಪಿ: ಜಿಲ್ಲೆಯ ಜನತೆಯ ತೀವ್ರ ಆಕ್ರೋಶದ ಬಳಿಕ ಒಲ್ಲದ ಮನಸ್ಸಿನಿಂದ ಕಾಟಾಚಾರಕ್ಕೆ ಉಡುಪಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಅಧಿಕಾರಿಗಳೊಡನೆ ನಡೆಸಿದ ಪ್ರಾಕೃತಿಕ ವಿಕೋಪದ ಹಾನಿ ವೀಕ್ಷಣೆ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದು ಚಿಕ್ಕಿ ತಿಂದಂತಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಎಲ್ಲಾ 5 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂಬ ಏಕೈಕ ಕಾರಣದಿಂದ ಸ್ಥಳೀಯ ಶಾಸಕರುಗಳಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯ ಪ್ರಹಸನ ಮಾಡುತ್ತಿದ್ದಾರೆ.

ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಹಾನಿಗಳ ಬಗ್ಗೆ ಸಭೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವಹಿಸಿಲ್ಲ.

ಉಡುಪಿ ಜಿಲ್ಲೆಯ ಕಾಪು, ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ ಕ್ಷೇತ್ರದಲ್ಲಿಯೂ ಮಳೆಯಿಂದ ವ್ಯಾಪಕ ಆಸ್ತಿ ಪಾಸ್ತಿ ನಷ್ಟ, ಕಡಲ್ಕೊರೆತ, ಬೆಳೆ ಹಾನಿ, ಗುಡ್ಡ ಜರಿತದಂತಹ ಘಟನೆಗಳು ನಡೆದಿದ್ದರೂ ಜಿಲ್ಲೆಯ ಬಗ್ಗೆ ತೀರ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಈಗಾಗಲೇ ಶಾಸಕರಾದ ಸುನೀಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಸ್ತುವಾರಿ ಸಚಿವರು ಈಗಾಗಲೇ ಹಲವು ಬಾರಿ ಘೋಷಿಸಿರುವ ಕಡಲ್ಕೊರೆತ ತಡೆಗೆ 5 ಕೋಟಿ ಅನುದಾನ, ಪರ್ಯಾಯ ಮಹೋತ್ಸವದ ವಿಶೇಷ 10 ಕೋಟಿ ಅನುದಾನ ಇನ್ನೂ ಮರೀಚಿಕೆಯಾಗಿದೆ.

ಕಳೆದ 14 ತಿಂಗಳಲ್ಲಿ ಉಸ್ತುವಾರಿ ಸಚಿವರು ಕೇವಲ ಒಂದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಜಿಲ್ಲೆಗೆ ಬಂದ ಅನುದಾನಗಳ ಬಗ್ಗೆ ದಾಖಲೆ ನೀಡಿದರೆ ಬಹಿರಂಗ ಚರ್ಚೆಗೂ ಬದ್ದನಾಗಿದ್ದು, ಉಡುಪಿಯ ಜನತೆಗೆ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ನಂಬಿಕೆ ಉಳಿದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!