ವಾಲ್ಮೀಕಿ ಹಗರಣದ ಹಣದಿಂದಲೇ ಕಾಂಗ್ರೆಸ್ ಸಂಸದರು ಗೆದ್ದಿದ್ದಾರೆ: ಸಿಮೆಂಟ್ ಮಂಜು ಆರೋಪ

ಉಡುಪಿ, ಜು.20: ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿ ಈ ಬಾರಿಯ ಲೋಕ ಸಭಾ ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿದೆ. ಇದೇ ಹಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ 9 ಮಂದಿ ಸಂಸದರು ಆಯ್ಕೆ ಯಾಗಿದ್ದಾರೆ. ಅದೇ ರೀತಿ ವಿವಿಧ ರಾಜ್ಯಗಳ ಚುನಾ ವಣೆಗಳಿಗೂ ಈ ಹಣವನ್ನು ಬಳಕೆ ಮಾಡಲಾಗಿದೆ ಎಂದು ಸಕಲೇಶ ಪುರ ಶಾಸಕ ಹಾಗೂ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಆರೋಪಿಸಿದ್ದಾರೆ.

ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಶಾರದಾ ಹೋಟೆಲ್‌ನ ’ಪ್ರಕೃತಿ’ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಉಡುಪಿ ಜಿಲ್ಲಾ ವಿಶೇಷ ಕಾರ್ಯ ಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗುತ್ತಿದೆ. ಇವರಿಗೆ ಸರಕಾರ ನಡೆಸುವ ಶಕ್ತಿಯೇ ಇಲ್ಲ. ಶಾಸಕರಿಗೆ ಕೇವಲ ಎರಡು ಕೋಟಿ ರೂ. ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಈ ಸರಕಾರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಿದ್ಧರಾಮಯ್ಯ ದಲಿತ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಪರ ಮುಖ್ಯಮಂತ್ರಿ ಎಂಬುದು ಕಳಚಿ ಬಿದ್ದಿದೆ. ಗ್ಯಾರಂಟಿಗಳನ್ನು ಮುಂದಿಟ್ಟು ಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಆ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಈ ಸಂದರ್ಭ ನೂತನ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಅವರನ್ನು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಸನ್ಮಾನಿಸಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಿದರು.

ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!