ಉಡುಪಿ: ಪ್ರಕ್ಷುಬ್ಧಗೊಂಡ ಕಡಲು- ತೆಂಗಿನ ಮರ ಸಮುದ್ರಪಾಲು, ತೀರ ನಿವಾಸಿಗಳಲ್ಲಿ ಆತಂಕ
ಉಡುಪಿ, ಜು.20: ಭಾರೀ ಗಾಳಿಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕೆಮ್ಮಣು ಸಮೀಪದ ಗುಜ್ಜರಬೆಟ್ಟು ಹಾಗೂ ನಾವುಂದ ಎಂಬಲ್ಲಿನ ಹಲವು ತೆಂಗಿನ ಮರಗಳು ಸಮುದ್ರಪಾಲಾಗಿವೆ.
ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟು ಎಂಬಲ್ಲಿ ಕಡಲ ಅಲೆಗಳು ತೀರಕ್ಕೆ ಬಡಿಯುತ್ತಿದ್ದು, ಇಲ್ಲಿನ ಸುಮಾರು ಐದಾರು ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದು ಕಡಲ ಒಡಲು ಸೇರಿವೆ. ತಡೆಗೋಡೆಗಾಗಿ ಹಾಕಲಾದ ಬೃಹತ್ ಕಲ್ಲುಗಳು ಈಗಾಗಲೇ ಸಮುದ್ರಪಾಲಾಗಿವೆ. ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಗುರುರಾಜ್, ಗ್ರಾಪಂ ಅಧ್ಯಕ್ಷ ಕುಸುಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕೊರೆತ ಕಂಡುಬಂದಿದ್ದು, ಇದೇ ರೀತಿ ಮುಂದುವರೆದರೆ ಮುಂದೆ ಮನೆಗಳಿಗೂ ಅಪಾಯವಾಗಬಹುದು ಎಂಬ ಭೀತಿ ತೀರದ ನಿವಾಸಿಗಳಲ್ಲಿ ಆವರಿಸಿದೆ. ಸದ್ಯಕ್ಕೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಮುಂದೆ ಶಾಶ್ವತ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅದೇ ರೀತಿ ನಾವುಂದ ಪರಿಸರದಲ್ಲಿಯೂ ಕಡಲ ಅಬ್ಬರ ಜೋರಾಗಿದ್ದು, ಅಲೆಗಳು ತೀರಕ್ಕೆ ಬಡಿಯುತ್ತಿವೆ. ಇದರಿಂದ ತೀರದಲ್ಲಿನ ತೆಂಗಿನ ಮರಗಳು ಕಡಲ ಪಾಲಾಗಿದ್ದು, ಇನ್ನಷ್ಟು ಮರಗಳು ಧರೆಗೆ ಉರುಳು ಭೀತಿಯಲ್ಲಿವೆ ಎಂದು ತಿಳಿದುಬಂದಿದೆ.