1 ಎಕ್ರೆಗಿಂತ ಕಡಿಮೆ ಪ್ರದೇಶದ ಏಕವಿನ್ಯಾಸ ಅನುಮೋದನೆ ನೂತನ ಆದೇಶ ರದ್ದುಮಾಡಿ: ಕರಾವಳಿ ಶಾಸಕರ ಮನವಿ
ಬೆಂಗಳೂರು: ಸ್ಥಳೀಯ ಯೋಜನೆ ಪ್ರದೇಶದ ಹೊರಭಾಗದಲ್ಲಿರುವ ಒಂದು ಎಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಸತಿಯೇತರರಿಗೆ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ಸಂಬಂಧಿಸಿದ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ನಲ್ಲಿಯೇ ಈ ಹಿಂದಿನಂತೆ ಪಡೆಯಲು ಆದೇಶ ನೀಡುವಂತೆ ನಗರಾಭಿವೃದ್ಧಿ ಸಚಿವರಾದ ಬಿ. ಎಸ್. ಸುರೇಶ್ ರವರಿಗೆ ಕರಾವಳಿ ಭಾಗದ ಶಾಸಕರು ಮನವಿ ಸಲ್ಲಿಸಿರುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣದ ಪೂರ್ವದಲ್ಲಿ ಏಕ ವಿನ್ಯಾಸ ಅನುಮೋದನೆಯು ನಗರ ಮತ್ತು ಗ್ರಾಮಾಂತರ ಇಲಾಖೆಯಿಂದ ಪಡೆದುಕೊಳ್ಳಬೇಕು ಎನ್ನುವ ಆದೇಶವಾಗಿದ್ದು ಇದರಿಂದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ.
ನಗರ ಮತ್ತು ಗ್ರಾಮಾಂತರ ಇಲಾಖೆಯಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ ಇದ್ದು ಗ್ರಾಮೀಣ ಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದುದರಿಂದ ಗ್ರಾಮೀಣ ಭಾಗದ ಜನರು ಈ ಹಿಂದಿನಂತೆ ಗ್ರಾಮ ಪಂಚಾಯತ್ ಅಥವಾ ತಾಲೂಕು ಪಂಚಾಯಿತಿಯಿಂದ ಏಕ ವಿನ್ಯಾಸ ಅನುಮೋದನೆ ಪಡೆದುಕೊಳ್ಳಲು ಆದೇಶಿಸುವಂತೆ ಕರಾವಳಿ ಭಾಗದ ಎಲ್ಲ ಶಾಸಕರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಭಾಗದ ಶಾಸಕರಾದ ವಿ. ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಕು. ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.