ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ, ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಅವರ ಮನೆಗೆ ಬೆಂಗಳೂರಿನ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಸಂಬಂಧ ಬಂದಿದ್ದ 12 ದೂರುಗಳ ಸಂಬಂಧ ಈ ಶೋಧಕಾರ್ಯ ಕೈಗೊಳ್ಳಲಾಗಿದೆ. ಲೋಕಾಯುಕ್ತ ಪೊಲೀಸ್‌ನ 100 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರು ನಗರದ ಆರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಇಬ್ಬರು, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಿ.ಟಿ ಮುದ್ದುಕುಮಾರ್ ಬೆಂಗಳೂರಿನ ನಾಗರಭಾವಿಯ ಎರಡನೇ ಹಂತದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಕಚೇರಿ ಇದೆ.

ತುಮಕೂರು ನಗರದ ಬನಶಂಕರಿ ನಗರದಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಮನೆ ಇದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಫಾರಂಹೌಸ್ ಇದೆ. ಅಲ್ಲದೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕವಿದೆ. ಈ ಎಲ್ಲ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!