ಮಲ್ಪೆ: ಹೋಟೇಲ್ ವ್ಯವಹಾರದಲ್ಲಿ ಪಾಲುದಾರನಾಗಿ ಮಾಡುತ್ತೇನೆಂದು ನಂಬಿಸಿ 10 ಲಕ್ಷ ರೂ. ವಂಚನೆ!
ಮಲ್ಪೆ: (ಉಡುಪಿ ಟೈಮ್ಸ್ ವರದಿ) ಹೋಟೆಲ್ ಮತ್ತು ಕೆಟರಿಂಗ್ ವ್ಯವಹಾರದಲ್ಲಿ ಪಾಲುದಾರನಾಗಿ ಮಾಡುತ್ತೇನೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಹತ್ತು ಲಕ್ಷ ರೂ. ವಂಚಿಸಿದ ಬಗ್ಗೆ ಉಡುಪಿ ನ್ಯಾಯಾಲದಲ್ಲಿ ಖಾಸಗಿ ದೂರು ದಾಖಲಾಗಿದೆ.
ಆರೋಪಿ ಸಂದೀಪ್ ವಿಠಲ ಕುಂದರ್ ಮಲ್ಪೆ ರಸ್ತೆಯಲ್ಲಿರುವ ಸಿಟಿ ಸೆಂಟರ್ ಕಟ್ಟಡದಲ್ಲಿ ಹೋಟೆಲ್ ಹಾಗೂ ಇನ್ನಿತರ ಕೆಟರಿಂಗ್ ವ್ಯವಹಾರ ನಡೆಸುತಿದ್ದು, ತನ್ನ ವ್ಯವಹಾರದಲ್ಲಿ ಕುಂದಾಪುರ ಕೋಡಿ ನಿವಾಸಿ ಜಗದೀಶ ಬಾಬು ಶ್ರೀಯಾನ್ (41) ಎಂಬವರಿಗೆ ಪಾಲುದಾರನಾಗಿ ಮಾಡುತ್ತೇನೆಂದು ನಂಬಿಸಿದ್ದಾರೆ.
ಅದರಂತೆ ಹೋಟೆಲ್ ಮಾಲಕ ಸಂದೀಪ್ ಅವರ ಕೆನರಾ ಬ್ಯಾಂಕ್ ಆದಿ ಉಡುಪಿ ಶಾಖೆ ಮತ್ತು ಆಕ್ಸಿಸ್ ಬ್ಯಾಂಕ್ ಉಡುಪಿ ಶಾಖೆಯ ಖಾತೆಗೆ ಒಟ್ಟು 9,85,000/- ರೂಪಾಯಿಯನ್ನು ಜಗದೀಶ್ ಅವರು ನೆಪ್ಟ್ ಮೂಲಕ ಆನ್ ಲೈನ್ ವರ್ಗಾವಣೆ ಮಾಡಿದ್ದು ಹಾಗೂ ನಗದು 15,000 ರೂ. ಆರೋಪಿಯ ಬಾಡಿಗೆ ಮನೆಗೆ ಹೋಗಿ ನೀಡಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಆರೋಪಿ ಸಂದೀಪ್ ವ್ಯವಹಾರದ ಬಗ್ಗೆ ಕರಾರನ್ನು ಮಾಡಿಕೊಡುತ್ತೇನೆಂದು, ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಮಲ್ಪೆಯಲ್ಲಿರುವ ಅವರ ಬಾಡಿಗೆ ಮನೆಗೆ ಹೋದಾಗ ಆರೋಪಿ ಮನೆಯಲ್ಲಿ ಇರದೆ ನಾಪತ್ತೆಯಾಗಿರುವುದಾಗಿ ಜಗದೀಶ್ ದೂರು ನೀಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2020 ಕಲಂ: 406, 415, 418, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.