ಸರಕಾರಿ ನೌಕರರ ವೇತನ ಪರಿಷ್ಕರಣೆ: ರಾಜ್ಯ ಸರಕಾರಕ್ಕೆ ವಾರ್ಷಿಕ 20,208 ಕೋಟಿ ರೂ.ಹೆಚ್ಚುವರಿ ವೆಚ್ಚ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಏಳನೆ ವೇತನ ಆಯೋಗದ ಶಿಫಾರಸ್ಸು ಜಾರಿ ಹಿನ್ನೆಲೆಯಲ್ಲಿ ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 20,208 ಕೋಟಿ ರೂ. ಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಮಂಗಳವಾರ ಈ ಸಂಬಂಧ ವಿಧಾನಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಸಿದ್ದರಾಮಯ್ಯ, ರಾಜ್ಯ ಸರಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆಗೆ 2022ರ ಅಕ್ಟೋಬರ್ 19ರಂದು 7ನೆ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 2024ರ ಮಾರ್ಚ್ 24ರಂದು ವರದಿಯನ್ನು ಸಲ್ಲಿಸಿರುತ್ತದೆ ಎಂದರು.
ಏಳನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 2022ರ ಜುಲೈ 1ರಿಂದ ಅನ್ವಯ ವಾಗುವಂತೆ ಪರಿಷ್ಕರಿಸಿ, 2024ರ ಆಗಸ್ಟ್ 1ರಿಂದ ಅನುಷ್ಠಾನಗೊಳಿಸಲು ನಿನ್ನೆ (ಜು.15) ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಅದರಂತೆ, 2022ರ ಜುಲೈ 1ಕ್ಕೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿಭತ್ಯೆ ಮತ್ತು ಶೇ.27.50 ರಷ್ಟು ಫಿಟ್‍ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿ ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ.58.50ರಷ್ಟು ಹೆಚ್ಚಳವಾಗುತ್ತದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ.32 ರಷ್ಟು ಹೆಚ್ಚಳವಾಗುತ್ತದೆ ಎಂದು ಸಿದ್ದರಾಮಯ್ಯ ವಿವರ ನೀಡಿದರು.
ಸರಕಾರಿ ನೌಕರರ ಕನಿಷ್ಠ ಮೂಲ ವೇತನವು 17ಸಾವಿರ ರೂ.ನಿಂದ 27ಸಾವಿರ ರೂ.ಗಳಿಗೆ, ಗರಿಷ್ಠ ವೇತನವು 1,50,600 ರೂ.ನಿಂದ 2,41,200 ರೂ.ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು 8,500 ರೂ.ನಿಂದ 13,500 ರೂ.ಗಳಿಗೆ ಮತ್ತು ಗರಿಷ್ಠ ಪಿಂಚಣಿಯು 75,300 ರೂ.ನಿಂದ 1,20,600 ರೂ.ಗಳಿಗೆ ಪರಿಷ್ಕರಣೆಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನೌಕರರು, ವಿವಿಧ ವಿಶ್ವ ವಿದ್ಯಾನಿಲಯಗಳಲ್ಲಿನ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಮಾಹಿತಿ ನೀಡಿದರು.