ಶಿರೂರು: ಬೃಹತ್ ಗುಡ್ಡ ಕುಸಿತ ಮಣ್ಣಿನಡಿಯಲ್ಲಿ ಸಿಲುಕಿದ 9 ಮಂದಿ
ಅಂಕೋಲಾ: ಕಳೆದ ಹಲವು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ.
ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಗುಡ್ಡ ಕುಸಿದಿದೆ. 5ಕ್ಕೂ ಹೆಚ್ಚು ಮಂದಿ ಗುಡ್ಡದ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಒಂದೇ ಕುಟಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ (36), ರೋಶನ(11), ಅವಂತಿಕಾ(6), ಜಗನ್ನಾಥ(55) ಎಂಬುವವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಐಆರ್‌ಬಿ ಕಂಪೆನಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟಿ ಕುಡಿಯುತ್ತಿದ್ದರು. ಇದೇ ವೇಳೆ ಭಾರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದ್ದು, ಚಾಲಕ ಹಾಗೂ ಕ್ಲೀನರ್ ಮಣ್ಣಿನಡಿ ಸಿಲುಕಿದ್ದಾರೆ. ಮಣ್ಣಿನಡಿ ಸಿಲುಕಿದವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಿಲ್ಲಾಡಳಿತವು ಹೆದ್ದಾರಿ ಮೇಲಿನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.
5 ಮಂದಿ ಕುಟುಂಬ ವಾಸವಿದ್ದ ಅಂಗಡಿ ಮೇಲೆ ಗುಡ್ಡ ಕುಸಿದಿದ್ದು, ಗ್ರಾಹಕರು ಸೇರಿ ಮನೆಯವರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡಿತ್ತು. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಶಿರೂರು ಪ್ರದೇಶ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕುಮಟಾ ನಡುವೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಒಟ್ಟಿನಲ್ಲಿ ರಣಭೀಕರ ಮಳೆ ಜನಸಾಮಾನ್ಯರಲ್ಲಿ ಭಯದವಾತಾವರಣ ಸೃಷ್ಟಿಸಿದೆ