ಉಳ್ಳಾಲ ಪಾಕಿಸ್ತಾನದಂತೆ ಕಾಣುತ್ತಿದೆ: ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ

ಮಂಗಳೂರು: ಮಂಗಳೂರಿನ ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನಕ್ಕೆ ಹೋದ ಅನುಭವವಾಗುತ್ತದೆ. ಈಗಾಗಲೇ ಅನೇಕ ಕಡೆ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉಳ್ಳಾಲ ಸಮೀಪದ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗು ಸ್ವಾರ್ಥಿಯಾಗುತ್ತದೆ. ಏಕೆಂದರೆ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿನೂ ಯಾರೂ ಇರುವುದಿಲ್ಲ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ ಎಂದರು.

ಕಿನ್ಯಾದಲ್ಲಿ ಕೇಳಿ ಸುತ್ತಲೂ ಯಾರಿದ್ದಾರೆ ಎಂದು, ಅಲ್ಲದೇ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಆಗ ನಮ್ಮ ದೇವಸ್ಥಾನವನ್ನು ಉಳಿಸುವವರು ಯಾರು..? ದೈವಸ್ಥಾನವನ್ನು ಉಳಿಸುವವರು ಯಾರು..? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು..? ಪಾಕಿಸ್ತಾನ ಯಾಕೆ ಸೃಷ್ಟಿಯಾಯಿತು..? ನಮ್ಮವರ ಸಂಖ್ಯೆ ಕಡಿಮೆ ಇತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಭಟ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪಾಕಿಸ್ತಾನ ಪ್ರೇಮ ಇದು ಹೊಸದೇನೂ ಅಲ್ಲ. ಅವರ ಮಾತು ಮಾತಿಗೆ ಪಾಕಿಸ್ತಾನದ ಜಪ ಮಾಡುವುದನ್ನು ನೋಡಿದರೆ ಮುಹಮ್ಮದ್ ಅಲಿ ಜಿನ್ನಾ ಅವರ ಗುರುಗಳೇ ಆಗಿರಬೇಕು. ಇವರು ಭಾರತಕ್ಕಿಂತ ಪಾಕಿಸ್ತಾನದ ಇತಿಹಾಸ ಹೆಚ್ಚು ಓದಿದಂತಿದೆ. ಸಮಾಜದಲ್ಲಿ ವಿಷಕಕ್ಕುವ ಕೆಲವು ಸರ್ಪಗಳಿಗೆ ಪಾಕಿಸ್ತಾನವೇ ಬಂಡವಾಳ. ತಮಗಂತೂ ಉಳ್ಳಾಲದ ಕಣಕಣದಲ್ಲೂ ಭಾರತವೇ ಕಾಣುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!