ಇನ್ನೆರಡು ದಿನ ಲಾಕ್ ಡೌನ್ ಮುಂದುವರಿಕೆ: ಕರ್ನಾಟಕ ಸರ್ಕಾರದಿಂದ ಆದೇಶ
ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ. ಮೇ.19ರವರೆಗೂ ಈಗಿರುವ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಕೋವಿಡ್-19 ನಿಯಂತ್ರಣಕ್ಕೆ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಮೂರನೇ ಹಂತದಲ್ಲಿನ ಮಾರ್ಗಸೂಚಿಗಳಲ್ಲಿನ ಕ್ರಮಗಳನ್ನು ಕಡ್ಡಾಯವಾಗಿ ಮುಂದಿನ ಆದೇಶದವರೆಗೆ ಅಥವಾ ಮೇ 19ರ ಮಧ್ಯರಾತ್ರಿ 12 ಗಂಟೆಯವರೆಗೂ ಪಾಲಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಆಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಪಂಜಾಬ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸರ್ಕಾರ ಈ ಮಾಸಾಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಲಾಕ್ ಡೌನ್ ನ್ನು ಇನ್ನೆರಡು ದಿನಗಳ ಕಾಲ ಮುಂದುವರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯಿಂದಾಗಿ ಕೆಎಸ್ ಆರ್ ಟಿ, ಬಿಎಂಟಿಸಿ ಬಸ್ ಗಳು ಪುನರ್ ಆರಂಭವಾಗುತ್ತಿಲ್ಲ. ಆಟೋ, ಟ್ಯಾಕ್ಸಿ ರಸ್ತೆಗೆ ಇಳಿಯುತ್ತಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಪಬ್ ಬಾಗಿಲು ತೆರೆಯುತ್ತಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆದು ಸಹಜ ಪರಿಸ್ಥಿತಿ ಮರುಕಳಿಸಲು ಇನ್ನೊಂದಿಷ್ಟು ದಿನಗಳ ಕಾಲ ಕಾಯಬೇಕಾಗಿದೆ.