ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಗುಡ್ಡ ಕುಸಿತ
ಉಡುಪಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರವಿವಾರ ನಸುಕಿನ ವೇಳೆ 1.30ರ ಸುಮಾರಿಗೆ ಆಗುಂಬೆ ಘಾಟಿಯ ನಾಲ್ಕು ಹಾಗೂ ಐದನೇ ತಿರುವಿನಲ್ಲಿನ ಗುಡ್ಡ ಕುಸಿದಿರುವ ಬಗ್ಗೆ ವರದಿಯಾಗಿದೆ.
ಈ ತಿರುವಿನ ರಸ್ತೆಯ ಬದಿಯ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದಿದೆ. ಅಲ್ಲದೇ ಇದರೊಂದಿಗೆ ಮರ ಕೂಡ ಧರೆಗೆ ಉರುಳಿದೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಆಗುಂಬೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹೆಬ್ರಿ ಪೊಲೀಸರು ಕೂಡ ಸ್ಥಳಕ್ಕೆ ತೆರಳಿದ್ದಾರೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಸ್ತೆಗೆ ಜರಿದ ಮಣ್ಣು, ಕಲ್ಲು ಹಾಗೂ ಮರವನ್ನು ತೆರೆವು ಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಈ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಾಟಿಯಲ್ಲಿ ಚಾಲಕರು ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಿಕೊಂಡು ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭಾರೀ ಮಳೆಯಿಂದ ಆಗುಂಬೆ ಘಾಟಿಯ ರಸ್ತೆ ಬದಿಯ ಮಣ್ಣು ಕುಸಿತ ಆಗುವ ಸಂಭವದ ಹಿನ್ನೆಲೆಯಲ್ಲಿ ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಜೂ.29ರಂದು ಆದೇಶ ಹೊರಡಿಸಿದ್ದರು.
ಇದೇ ರೀತಿ ಮಳೆ ಮುಂದುವರೆದರೆ ಮತ್ತಷ್ಟು ಭಾಗದಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಭೀತಿ ಉಂಟಾಗಿದೆ. ಹೀಗಾದರೆ ಮುಂದೆ ಶಿವಮೊಗ್ಗ- ಉಡುಪಿ ಸಂಚರಿಸುವ ವಾಹನಗಳು ಸಿದ್ಧಾಪುರ ಹುಲಿಕಲ್ ಘಾಟಿ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ.