ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯ ಸೂಚನೆ – ಎರಡು ದಿನ ರೆಡ್ ಅಲರ್ಟ್
ಉಡುಪಿ, ಜು.13: ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಿಗೆ ಮುಂದಿನೆರಡು ದಿನಗಳ ಕಾಲ ರೆಡ್ ಅಲರ್ಟ್‌ನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಘೋಷಿಸಿದೆ.
ರವಿವಾರ ಹಾಗೂ ಸೋಮವಾರ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಇದ್ದು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇರುತ್ತದೆ. ಮಂಗಳವಾರ ಹಾಗೂ ಬುಧವಾರದಂದು ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಎಲ್ಲಾ ಆರು ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಇರುತ್ತದೆ ಎಂದು ಹವಾಮಾನ ಕೇಂದ್ರದ ವರದಿ ತಿಳಿಸಿದೆ.
ಈ ಸಂದರ್ಭ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಗಂಟೆಗೆ 40ರಿಂದ 50ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸುವ ಸಂಭವವಿರುತ್ತದೆ ಎಂದೂ ಹೇಳಲಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 92.7ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ ಅತ್ಯಧಿಕ 101.8ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 100.4 ಮಿ.ಮೀ. ಮಳೆಯಾಗಿದೆ. ಉಳಿದಂತೆ ಬೈಂದೂರಿನಲ್ಲಿ 98.5, ಕಾರ್ಕಳದಲ್ಲಿ 92.8, ಹೆಬ್ರಿಯಲ್ಲಿ 83.8, ಕಾಪುವಿನಲ್ಲಿ 82.4 ಹಾಗೂ ಉಡುಪಿಯಲ್ಲಿ 66.2ಮಿ.ಮೀ. ಮಳೆಯಾಗಿದೆ.
ಎರಡು ಮನೆಗಳಿಗೆ ಹಾನಿ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಕುಂದಾಪುರ ಹಾಗೂ ಕಾಪು ತಾಲೂಕಿನಲ್ಲಿ ಎರಡು ಮನೆ ಗಳಿಗೆ ಹಾನಿಯಾಗಿರುವ ವರದಿ ಬಂದಿದೆ. ಕುಂದಾಪುರದ ಕಮಲಶಿಲೆ ಗ್ರಾಮದ ನಾಗರಾಜ ನಾಯ್ಕ ಎಂಬವರ ವಾಸದ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು 75 ಸಾವಿರ ರೂ. ನಷ್ಟವಾದರೆ, ಕಾಪುವಿನ ತೆಂಕ ಗ್ರಾಮದಲ್ಲಿ ಜಾನಕಿ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಯಾಗಿ 20 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.