ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ: 11ರಲ್ಲಿ 9 ಸ್ಥಾನ ಗೆದ್ದ ಬಿಜೆಪಿ ಕೂಟ
ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 11 ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಪಿ ಸೇಡು ತೀರಿಸಿಕೊಂಡಿವೆ.
ಹಿರಿಯ ಬಿಜೆಪಿ ಮುಖಂಡ ಗೋಪಿನಾಥ ಮುಂಢೆಯವರ ಪುತ್ರಿ ಪಂಕಜಾ ಮುಂಢೆ ಸೇರಿದಂತೆ ಐದು ಮಂದಿಯನ್ನು ಬಿಜೆಪಿ ಕಣಕ್ಕಿಳಿಸಿದ್ದು, ಎಲ್ಲ ಐದು ಮಂದಿ ಗೆಲುವು ಸಾಧಿಸಿದ್ದಾರೆ. ಶಿವಸೇನೆ ಹಾಗೂ ಎನ್ ಸಿಪಿ ತಲಾ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದು, ಎಲ್ಲ ನಾಲ್ಕು ಮಂದಿ ಗೆಲುವಿನ ನಗೆ ಬೀರಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ ಅಗಾಡಿಯ ಕಾಂಗ್ರೆಸ್, ಶಿವಸೇನೆ ಹಾಗೂ ಎನ್ ಸಿಪಿ ಬಣ ಮೂರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಈ ವರ್ಷದ ಕೊನೆಗೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುವ ರಿಹರ್ಸಲ್ ಎನಿಸಿದ್ದ ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸೋಲು ಎಂವಿಎಗೆ ಆಘಾತ ತಂದಿದೆ.
ಬಿಜೆಪಿ ಮುಖಂಡ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಎಕ್ಸ್ ಪ್ಲಾಟ್ ಫಾರಂನಲ್ಲಿ ಗೆಲುವಿನ ಸಂಭ್ರಮ ಹಂಚಿಕೊಂಡಿದ್ದು, ಟ್ವಿಟ್ಟರ್ ನಲ್ಲಿ “9/9″ ಹಾಗೂ ಥಂಬ್ಸ್ ಅಪ್ ಎಮೋಜಿ ಪೋಸ್ಟ್ ಮಾಡಿದ್ದಾರೆ”
ಫಲಿತಾಂಶದ ಬಳಿಕ ಮಾತನಾಡಿದ ಅಜಿತ್ ಪವಾರ್, ಐದು ಮಂದಿ ಶಾಸಕರು ನಮ್ಮನ್ನು ಬೆಂಬಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಚುನಾವಣೆಗಳು ನಡೆದಾಗಲೆಲ್ಲ ಆರೋಪಗಳು ಬರುತ್ತವೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗುರುವಾರ ಬೆಳಿಗ್ಗೆಯಿಂದ ಮತದಾನ ನಡೆದಿದ್ದು, 11 ಸ್ಥಾನಗಳಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದರು.
ಶಾಸಕರೇ ಮತದಾನ ಮಾಡಿ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಗೆಲುವಿಗೆ 23 ಶಾಸಕರ ಬೆಂಬಲ ಅಗತ್ಯವಿತ್ತು. 103 ಶಾಸಕರನ್ನು ಹೊಂದಿರುವ ಬಿಜೆಪಿ 5 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ನಾಲ್ಕು ಸ್ಥಾನಗಳು ಖಾತರಿಯಾದ ಬಳಿಕ ಐದನೇ ಅಭ್ಯರ್ಥಿಗೆ 12 ಮತಗಳು ಇದ್ದವು. ಶಿಂಧೆ ಬಣಕ್ಕೆ ಎರಡು ಸ್ಥಾನಗಳನ್ನು ಗೆಲ್ಲಲು ಒಂಬತ್ತು ಮತಗಳ ಕೊರತೆ ಇತ್ತು. ಅಂತೆಯೇ 39 ಸ್ಥಾನಗಳನ್ನು ಹೊಂದಿದ್ದ ಎನ್ಸಿಪಿಗೆ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಏಳು ಸ್ಥಾನಗಳು ಕಡಿಮೆ ಇದ್ದವು. ಮಹಾಯುತಿ ಕೂಟಕ್ಕೆ ಎಲ್ಲ ಒಂಬತ್ತು ಸ್ಥಾನಗಳನ್ನು ಗೆಲ್ಲಲು ಒಟ್ಟು 28 ಮತಗಳ ಕೊರತೆ ಇತ್ತು.
ಇದಕ್ಕೆ ವಿರುದ್ಧವಾಗಿ 37 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಏಕೈಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಪಕ್ಷದ ಬಳಿ 14 ಹೆಚ್ಚುವರಿ ಮತಗಳಿದ್ದವು. ಇದನ್ನು ಎಂವಿಎ ಪಾಲುದಾರರಿಗೆ ಹಂಚಿಕೆ ಮಾಡಲಾಗಿತ್ತು. ಪವಾರ್ ಬಣ ರೈತರ ಮತ್ತು ಕಾರ್ಮಿಕರ ಪಕ್ಷದ ಜಯಂತ್ ಪಾಟೀಲ್ ಅವರನ್ನು ಬೆಂಬಲಿಸಿತ್ತು. 13 ಶಾಸಕರನ್ನು ಹೊಂದಿದ್ದ ಪವಾರ್ ಬಣಕ್ಕೆ 10 ಮತಗಳ ಕೊರತೆ ಇತ್ತು.
ಎಂಟು ಸ್ಥಾನಗಳ ಕೊರತೆ ಇದ್ದ ಠಾಕ್ರೆ ಶಿವಸೇನೆ ಕೂಡಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಪಕ್ಷ ಹೆಚ್ಚುವರಿ ಮತಗಳನ್ನು ಮಿತ್ರಪಕ್ಷಗಳಿಗೆ ನೀಡಿದ್ದಲ್ಲಿ, ಎಲ್ಲ ಮೂರು ಸ್ಥಾನಗಳನ್ನು ಗೆಲ್ಲಲು ಎಂವಿಎಗೆ ನಾಲ್ಕು ಮತಗಳ ಕೊರತೆ ಇತ್ತು. ಎಸ್ಪಿ ಹಾಗೂ ಎಐಎಂಐಎಂನ ತಲಾ ಇಬ್ಬರು ಶಾಸಕರು ಹಾಗೂ ಸಿಪಿಐಎಂ ಹಾಗೂ ಪಕ್ಷೇತರರ ತಲಾ ಒಂದು ಮತಗಳು ನಿರ್ಣಾಯಕವಾಗಿದ್ದವು. ಹೀಗೆ ಆರು ಹೆಚ್ಚುವರಿ ಮತಗಳು ಲಭ್ಯವಾದಲ್ಲಿ ಎಲ್ಲ ಮೂರು ಸ್ಥಾನಗಳನ್ನು ಎಂವಿಎ ಗೆಲ್ಲುತ್ತಿತ್ತು. ಆದಾಗ್ಯೂ ಅಡ್ಡಮತದಾನ ನಡೆದಿರುವುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ.