ಪರಶುರಾಮ ಥೀಮ್ ಪಾರ್ಕ್ ವಿವಾದ: ವೀಡಿಯೊ ಚಿತ್ರೀಕರಣದ ವಿಚಾರದಲ್ಲಿ ಶಾಸಕ ಸುನಿಲ್-ಶುಭದರಾವ್ ನಡುವೆ ವಾಗ್ವಾದ

Oplus_131072

ಕಾರ್ಕಳ: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನೇತೃತ್ವದಲ್ಲಿ ಪೆರ್ವಾಜೆಯ ನಾರಾಯಣ ಗುರು ಸಭಾಭವನದಲ್ಲಿ ಶುಕ್ರವಾರ ನಡೆದ ಜನ ಸ್ಪಂದನ ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕಿನ ಕುರಿತು ನಿಟ್ಟೆ ಗ್ರಾಮದ ವಿವೇಕ್ ಶೆಟ್ಟಿ ಎಂಬವರು ಅಹವಾಲು ನೀಡಿದ್ದರು.

ಅವರು ಪರಶುರಾಮ ಮೂರ್ತಿಯ ಕುರಿತು ಜಿಲ್ಲಾಧಿಕಾರಿ ಜತೆ ದೂರು ನೀಡಿ, ಚರ್ಚಿಸುತ್ತಿದ್ದಾಗ ಈ ದೃಶ್ಯವನ್ನು ಪುರಸಭಾ ಸದಸ್ಯ ಶುಭದ ರಾವ್ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ವೀಡಿಯೊ ಚಿತ್ರೀಕರಣಕ್ಕೆ ಆಕ್ಷೇಪ ಎತ್ತಿದ ಶಾಸಕ ಸುನಿಲ್ ಕುಮಾರ್, ಶುಭದ್ ರಾವ್ ಅವರ ಮೊಬೈಲ್ ಸೀಝ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ‌

ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ವೀಡಿಯೊ ಮಾಡದಂತೆ ಶುಭದ್ ರಾವ್ ಅವರ ಮೊಬೈಲ್ ಕಸಿಯಲು ಮುಂದಾದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಾವು ಜನಸ್ಪಂದನ ಸಭೆಗೆ ಸಮಸ್ಯೆ ಹೇಳಿಕೊಳ್ಳಲು ಬಂದಿರುವುದು, ಮೊಬೈಲ್ ಕಸಿಯಲು ನಿಮಗೆ ಅಧಿಕಾರ ಇಲ್ಲ ಎಂದಾಗ ಇಡೀ ಸಭೆಯೇ ಗೊಂದಲದ ಗೂಡಾಯಿತು. ಈ ಘಟನೆಯ ಕುರಿತು ದೃಶ್ಯಾವಳಿ ಗಳನ್ನು ಸೆರೆ ಹಿಡಿಯುತ್ತಿದ್ದ ಪತ್ರಕರ್ತರಿಗೆ ವೀಡಿಯೊ ಮಾಡದಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚಿಸಿದಾಗ ಪೊಲೀಸರು ವೀಡಿಯೊ ಮಾಡದಂತೆ ಪತ್ರಕರ್ತರನ್ನು ತಡೆಯಲು ಮುಂದಾದರು. ಇದರಿಂದ ಆಕ್ರೋಶ ಗೊಂಡ ಪತ್ರಕರ್ತರು ಪೊಲೀಸರ ಕ್ರಮ ಖಂಡಿಸಿದಾಗ ಮಾತಿನ ಚಕಮಕಿ ನಡೆಯಿತು.

ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಡಾ.ಅರುಣ್‌ ಕುಮಾರ್ ಮಾತನಾಡಿ, ಈ ಪ್ರಕರಣ ತನಿಖಾ ಹಂತದಲ್ಲಿದೆ, ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡಿಲ್ಲ: ಸಾರ್ವಜನಿಕ ಆಕ್ರೋಶ

ತಾಲೂಕು ಮಟ್ಟದ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಲು ಕೌಂಟರ್‌ಗಳನ್ನು ತೆರೆದು ಸರತಿ ಸಾಲಿನಂತೆ ವೇದಿಕೆಯಲ್ಲೇ ಅರ್ಜಿಗಳನ್ನು ವಿಲೇ ಮಾಡಲಾಯಿತು. ಆದರೆ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲ ಇದು ಕೇವಲ ಕಾಟಾಚಾರದ ಸಭೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಿದ್ದ ಅಧಿಕಾರಿಗಳು ಸಾರ್ವಜನಿಕರಿಗೆ ಮೈಕ್ ನೀಡದೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡದೇ ಅಹವಾಲುಗಳನ್ನು ಪಡೆದು ಕಂದಾಯ ಅದಾಲತ್ ರೀತಿಯಲ್ಲಿ ವೇದಿಕೆಯಲ್ಲೇ ಮಾತುಕತೆ ನಡೆಸಿದ್ದಾರೆ. ಜನ ಸ್ಪಂದನ ಸಭೆಯಲ್ಲಿ ಜನರ ಸಮಸ್ಯೆಗಳ ಸ್ವರೂಪ ಹಾಗೂ ದೂರಿನ ಕುರಿತು ಕೈಗೊಂಡ ಕ್ರಮದ ಕುರಿತು ಸಭೆಯಲ್ಲಿ ಮಾಹಿತಿ ನೀಡದೇ ಇದು ಕೇವಲ ಕಾಟಾಚಾರಕ್ಕೆ ನಡೆಸಿದ ಜನ ಸ್ಪಂದನ ಸಭೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್, ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್, ಕಾರ್ಕಳ ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ ರೂಪ ಟಿ ಶೆಟ್ಟಿ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!