ರಾಷ್ಟ್ರೀಯ ಭದ್ರತಾ ನಿಯಮ ಉಲ್ಲಂಘಿಸಿ ರಾಹುಲ್ ಗಾಂಧಿಗೆ ಹಲ್ಲೆ ಪ್ರಚೋದನೆ- ಎಸ್ಪಿಗೆ ದೂರು
ಉಡುಪಿ: ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತ್ರತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿಯವರು ಸಾರ್ವಜನಿಕವಾಗಿ ಹಿಂಸೆಗೆ ಪ್ರಚೋದನೆ ನೀಡಿರುವ ವಿಷಯದ ಕುರಿತು ಗುರುವಾರ ಉಡುಪಿ ಜಿಲ್ಲಾ ವರಿಷ್ಟಧಿಕಾರಿ ಡಾ. ಅರುಣ್ ಕೆ ಅವರಿಗೆ ದೂರು ನೀಡಲಾಯಿತು.
ಲೋಕಸಭಾ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಪ್ರತಿಭಟನೆ ಮಾಡುವ ನೆಪದಲ್ಲಿ ತನ್ನ ಬಳಿ ಶಸ್ತ್ರಾಸ್ತ್ರಗಳು ಇವೆಯೆಂದೂ ಅದನ್ನು ಉಪಯೋಗಿಸಬೇಕಾಗುತ್ತದೆ ಹಾಗೂ ಯಾರಾದರೂ ಲೋಕಸಭೆಯ ಒಳಗೆ ಹೋಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯ ಬೇಕೆಂದು ಕರೆ ಕೊಟ್ಟಿದ್ದಾರೆ.
ಇದು ಹಿಂಸೆ ಮಾಡುವಂತೆ ಸಾರ್ವಜನಿಕವಾಗಿ ನೀಡಿದ ಕರೆಯಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರಿಗೆ ಸಂವಿಧಾನಬದ್ದವಾಗಿ ವಿಶೇಷ ಭದ್ರತಾ ನಿಯಮಗಳ ಅಡಿಯಲ್ಲಿ ರಕ್ಷಣೆಯಿದೆ. ಶಾಸಕ ಡಾ. ಭರತ್ ಶೆಟ್ಟಿ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ರಾಹುಲ್ ಗಾಂಧಿಯವರ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿರುವುದು ಗಂಭೀರ ಆರೋಪವಾಗಿದೆ. ಆದ್ದರಿಂದ ಡಾ. ಭರತ್ ಶೆಟ್ಟಿಯವರ ಮೇಲೆ ಹಾಗೂ ಈ ಪ್ರಚೋದನೆಗೆ ಬೆಂಬಲ ನೀಡಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ ಅವರ ಮೇಲೆ ಕ್ರಿಮಿನಲ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲು ಕೋರಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಹೆಬ್ಬಾರ್, ಗಣೇಶ ನೆರ್ಗಿ, ಸುರೇಶ್ ಶೆಟ್ಟಿ ಬನ್ನಂಜೆ, ಸುರೇಂದ್ರ ಆಚಾರ್ಯ, ಅನಂತ್ ನಾಯ್ಕ್, ಕೃಷ್ಣ ಹೆಬ್ಬಾರ್, ಶರತ್ ಶೆಟ್ಟಿ, ಸುಕನ್ಯಾ ಪೂಜಾರಿ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಸಾಯಿರಾಜ್ ಕಿದಿಯೂರು ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.