ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ, ಜು.11: ಜನರಿಗೆ ಸೇವೆ ಸಲ್ಲಿಸುವ ಅವಕಾಶ ಪ್ರತಿಯೊಬ್ಬರಿಗೂ ದೊರೆಯುದಿಲ್ಲ. ಸರ್ಕಾರಿ ಅಧಿಕಾರಿಗಳು ತಮಗೆ ದೊರೆತಿರುವ ಅವಕಾಶವನ್ನು ಬಳಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪ್ರತಿಯೊಬ್ಬರ ಅಭಿವೃದ್ಧಿಯಲ್ಲಿ ಶ್ರಮಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಇಂದು ಕಾಪು ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪುರಸಭೆ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಪು ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಸ್ಪಂದನ ಕಾರ್ಯಕ್ರಮದ ಮೂಲಕ ಅಧಿಕಾರಿಗಳು ನಾಗರಿಕರ ಧ್ವನಿಗೆ ಧ್ವನಿಯಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಷ್ಟಗಳನ್ನು ತಿಳಿಯುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜನಸಾಮಾನ್ಯರ ದೈನಂದಿನ ಸಮಸ್ಯೆಗಳಾದ ಪಹಣಿ ಬದಲಾವಣೆ, ಜಾತಿ ಪ್ರಮಾಣ ಪತ್ರ, ವಾಸ ದೃಡೀಕರಣ ಪತ್ರ ಹಾಗೂ ಇನ್ನಿತರ ಸಣ್ಣಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡದೇ ಸುಲಭವಾಗಿ ಇತ್ಯಾರ್ಥವಾಗಬೇಕು ಎಂಬ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಜನಸ್ಪಂದನದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಸಂಬ0ಧಪಟ್ಟ ಅಧಿಕಾರಿಗಳು ಮುತುವರ್ಜಿಯಿಂದ ಇತ್ಯರ್ಥ ಮಾಡಬೇಕು ಹಾಗೂ ಕಾಲಾವಕಾಶದೊಳಗೆ ಪರಿಹಾರವನ್ನು ಒದಗಿಸಬೇಕು ಎಂದ ಅವರು ಕಳೆದ ಬಾರಿ ಸುಮಾರು 47 ಅರ್ಜಿಗಳು ಬಂದಿದ್ದು, ಪ್ರತಿಯೊಂದು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ಸಾರ್ವಜನಿಕರಿಂದ ಸ್ಪೀಕೃತಗೊಂಡ ಮನವಿ ಹಾಗೂ ಕುಂದು ಕೊರತೆಗಳ ಅರ್ಜಿಯನ್ನು ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಅಲ್ಲದೇ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐ.ಪಿ.ಜಿ.ಆರ್.ಎಸ್ ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತಗೊಂಡ ಅರ್ಜಿಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಗೆಹರಿಯುವಂತಹ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಶೀಘ್ರದಲ್ಲೇ ಬಗೆಹರಿಸಲಾಗುವುದು, ಸರ್ಕಾರದ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಪಡಿತರ ಚೀಟಿ, ಮೀನುಗಾರಿಕೆ ಇಲಾಖೆಯಿಂದ ಕಿಟ್ ಮತ್ತು ಲೈಫ್ ಜಾಕೆಟ್ ಹಾಗೂ ಪಶು ಸಂಗೋಪನೆ ಇಲಾಖೆ ವತಿಯಿಂದ ಉಚಿತ ನೆಲಹಾಸು ವಿತರಣೆಯ ಆಯ್ಕೆ ಪತ್ರವನ್ನು ಪಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಿಎಫ್‌ಓ ಗಣಪತಿ, ಎಎಸ್‌ಪಿ ಸಿದ್ದಲಿಂಗಪ್ಪ, ಸಹಾಯಕ ಕಮೀಷನರ್ ರಶ್ಮಿ, ತಹಶೀಲ್ದಾರ್ ಪ್ರತಿಭಾ ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ ಸೆಲ್ವ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 60 ಅರ್ಜಿಗಳು ಸಲ್ಲಿಕೆಯಾಗಿದ್ದು, ರಸ್ತೆ, ಮನೆ ಮಂಜೂರು, ಚರಂಡಿ ವ್ಯವಸ್ಥೆ, ಫ್ಲಾಟಿಂಗ್ ಸಮಸ್ಯೆ, ಹಕ್ಕುಪತ್ರ, ಜಮೀನು ಅಳತೆ ಸೇರಿದಂತೆ ಹಲವು ಅಹವಾಲುಗಳು ಸಲ್ಲಿಕೆಯಾಗಿದ್ದವು.