ನೆರೆ ಹಾವಳಿ, ಸಂತ್ರಸ್ತರ ಗೋಳು ಪರಿಹರಿಸದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಪತ್ತೆ?- ಸಂಧ್ಯಾ ರಮೇಶ್ ಆಕ್ರೋಶ

Oplus_131072

ಉಡುಪಿ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ನೆರೆ ಹಾವಳಿ, ಕಡಲ್ಕೊರೆತ, ಆಸ್ತಿ-ಪಾಸ್ತಿ ನಷ್ಟ, ಬೆಳೆ ಹಾನಿ ಸಹಿತ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲೆಯಲ್ಲಿ ಎಲ್ಲಿಯೂ ಕಾಣಲು ಸಿಗದೇ ನಾಪತ್ತೆಯಾಗಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂಬ ಕಾರಣಕ್ಕೆ ಉಡುಪಿ ಜಿಲ್ಲೆಯನ್ನು ತಾವು ಯಾವಾಗಲೂ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದೀರಾ ಎಂಬುದನ್ನು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.

ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸರಕಾರದ ಆದಾಯ ಹೆಚ್ಚಿಸಲು ಉಡುಪಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸೂಚನೆ ನೀಡುತ್ತಿದ್ದಾರೆ ವಿನಃ ನೆರೆ ಹಾವಳಿಯಿಂದ ಜಿಲ್ಲೆಯ ಅನೇಕ ಮುಖ್ಯ ರಸ್ತೆಗಳು ಹೊಳೆಯಂತೆ ಮಾರ್ಪಾಡಾಗಿ ಕೃತಕ ಈಜು ಕೊಳ ನಿರ್ಮಾಣವಾಗಿರುವ ಕುರಿತು ದಿವ್ಯ ಮೌನ ವಹಿಸಿರುವುದು ಶೋಚನೀಯವಾಗಿದೆ ಎಂದು ಸಂಧ್ಯಾ ರಮೇಶ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸುದೀರ್ಘ ಅವಧಿಗೆ ಜಿಲ್ಲೆಗೆ ಆಗಮಿಸದೇ ಇದ್ದ ಕಾರಣಕ್ಕೆ ಸ್ವಪಕ್ಷೀಯರಿಂದ ಲೇ ಟೀಕೆಗೆ ಗುರಿಯಾಗಿರುವುದು ಇತಿಹಾಸ.

ಉಡುಪಿ ಪರಿಸರದಲ್ಲಿ ರಕ್ಷಣಾ ಸಿಬ್ಬಂದಿಗಳ ಸಹಿತ ಮಾದರಿ ಜನಪ್ರತಿನಿಧಿಗಳು ಜೀವದ ಹಂಗು ತೊರೆದು ನೆರೆ ಹಾವಳಿಯಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಜೊತೆಗೆ ಸಮಾಜ ಸೇವಕರು ಸಹಾಯ ಹಸ್ತ ಚಾಚುತ್ತಿರುವ ದೃಶ್ಯ ಜನ ಮೆಚ್ಚುಗೆ ಪಡೆದರೆ, ಜಿಲ್ಲೆಗೆ ಉಸ್ತುವಾರಿ ಸಚಿವೆಯೊಬ್ಬರು ಇದ್ದಾರೆಯೇ ಎಂಬುದನ್ನು ಜನಸಾಮಾನ್ಯರೂ ಪ್ರಶ್ನಿಸುವಂತಾಗಿದೆ.

ದಿನ ಬೆಳಗಾದರೆ ಸಂವಿಧಾನದ ಬಗ್ಗೆ ಪುಂಖಾನುಪುಂಖ ಬೊಗಳೆ ಬಿಡುವ ಕಾಂಗ್ರೆಸಿಗರು ಜಿಲ್ಲೆಯ ಉಸ್ತುವಾರಿ ಸಚಿವೆಯ ನಾಪತ್ತೆ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ ಎಂಬುದು ನಿಗೂಢವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ನೆರೆ ಹಾವಳಿ, ಆಸ್ತಿ-ಪಾಸ್ತಿ ನಷ್ಟ, ಬೆಳೆ ಹಾನಿ ಕುರಿತು ತುರ್ತು ಸಭೆ ನಡೆಸಿ, ಅಗತ್ಯ ಪರಿಹಾರ ಮಾರ್ಗೋಪಾಯಗಳ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!