ಬಿಪಿಎಲ್ ಕಾರ್ಡ್‌ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ!
ಬೆಂಗಳೂರು: ರಾಜ್ಯದ ಶೇ.80ರಷ್ಟು ಜನರು ಬಳಿ ಬಿಪಿಎಲ್ ಕಾರ್ಡ್ ಇದ್ದು, ಯಾರೆಲ್ಲಾ ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರೋ ಅದನ್ನು ಪತ್ತೆ ಹಚ್ಚಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ಹಾಗೂ ಸಿಇಓಗಳ ಜೊತೆಗಿನ ಸಭೆಯಲ್ಲಿ ಈ ವಿಚಾರವಾಗಿ ಮುಖ್ಯಮಂತ್ರಿಗಳು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಶೇ.80 ರಷ್ಟು ಜನರು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು ಎಂದು ಸೂಚನೆ ನೀಡಿದರು.
ಕಾಲ ಮಿತಿ ಮೀರಿದ ಅರ್ಜಿಗಳು ಏಕೆ ಇದೆ ಎಂದು ಇದೇ ವೇಳೆ ಆಯಾ ಜಿಲ್ಲಾಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿ ಇತ್ಯರ್ಥ ಮಾಡಲು ಸೂಚಿಸಿದರು. ಪಿಂಚಣಿ ಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 2225 ಗ್ರಾಮಗಳು ಮತ್ತು 2038334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಸಂತ್ರಸ್ಥ. ಗ್ರಾಮಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು. ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿ ಆಗಿರುವವರಿಗೆ SDRF ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡಿ ಎನ್ನುವ ಸೂಚನೆ ನೀಡಿದರು.