ಬಿಜೆಪಿ ಪಕ್ಷ ‘ಬಾರ್ ಜನತಾ ಪಾರ್ಟಿ’ ಎಂದು ಹೆಸರು ಬದಲಿಸುವುದು ಸೂಕ್ತ: ಸಂಸದ ಸುಧಾಕರ್ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆಗೆ ಕಾಂಗ್ರೆಸ್ ಆಕ್ರೋಶ
ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ ಹಂಚಿಕೆ ಮಾಡಿರುವ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ಮತ್ತು ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಬಿಜೆಪಿಯನ್ನು ʼಬಾರ್ ಜನತಾ ಪಾರ್ಟಿʼ ಎಂದು ಟೀಕಿಸಿದೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ” “ಊಟನೂ ನಮ್ದು ಎಣ್ಣೆನೂ ನಮ್ದು“ ಎನ್ನುವ ಬಿಜೆಪಿ ಪಕ್ಷ ”ಬಾರ್ ಜನತಾ ಪಾರ್ಟಿ” ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ!. ಜನಸಾಮಾನ್ಯರನ್ನು ಮದ್ಯದ ದಾಸರಾಗಲು ಪ್ರೋತ್ಸಾಹಿಸುವ ಬಿಜೆಪಿಯಿಂದ ಜನರ ಉದ್ದಾರವನ್ನು ಬಯಸುವುದು ಮೂರ್ಖತನವಾಗುತ್ತದೆ. ಧರ್ಮ, ಸಂಸ್ಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿಯ ಅಸಲಿ ಸಂಸ್ಕೃತಿ ಮಹಿಳಾ ಪೀಡನೆ, ಹೆಂಡದ ಸೇವನೆ! ಸಂಸದ ಸುಧಾಕರ್ ಅವರು ಜನರಿಗೆ ಮದ್ಯದ ಬಾಟಲಿಗಳನ್ನು ಹಂಚುವ ಮೂಲಕ ಬಿಜೆಪಿಯ ನೈಜ ಸಂಸ್ಕೃತಿಯನ್ನು ಬಯಲು ಮಾಡಿದ್ದಾರೆ.” ಎಂದು ಟೀಕಿಸಿದೆ.
“ಸಾರ್ವಜನಿಕರಿಗೆ ಎಚ್ಚರಿಕೆ – ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಬಿಜೆಪಿ ದೇಶಕ್ಕೆ ಹಾನಿಕರ.” ಎಂದೂ ಕಾಂಗ್ರೆಸ್ ವ್ಯಂಗ್ಯವಾಡಿದೆ.
ರವಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಬಾಡೂಟ ಹಾಗೂ ಮದ್ಯವನ್ನು ಕೂಡ ಹಂಚಲಾಗಿದೆ. ಈ ಸಂಬಂಧ ವೀಡಿಯೊಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.