ಉಡುಪಿ ನಗರದಲ್ಲಿ ಮಳೆ ಅವಾಂತರ- ಜನಜೀವನ ಅಸ್ತವ್ಯಸ್ತ

ಉಡುಪಿ, ಜು.8: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೋಮವಾರ ಬೆಳಗ್ಗೆ ಉಡುಪಿ ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು, ನೂರಾರು ಮನೆಗಳು ಜಲಾವೃತಗೊಂಡಿವೆ. ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿಯಾಗಿದೆ. ನೆರೆಯಿಂದ ಸಿಲುಕಿರುವ ಹಲವು ಮಂದಿಯನ್ನು ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ನಗರದ ಕರಂಬಳ್ಳಿ, ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಅಲೆವೂರು, ಉದ್ಯಾವರ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ ಗೊಂಡಿದ್ದು, 200ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಇದರಿಂದ ಇಡೀ ನಗರದಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುಂಡಿಬೈಲು, ಬಡಗುಪೇಟೆಯಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿವೆ. ಅದೇ ರೀತಿ ಗುಂಡಿಬೈಲಿನ ಮನೆಗಳ ಒಳಗೂ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಬೈಲಕರೆಯಲ್ಲಿ ಜಲದಿಗ್ಬಂಧನಕ್ಕೆ ಒಳಗಾದ ಒಂದು ಕುಟುಂಬವನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು. ಅದೇ ರೀತಿ ಪಾಡಿಗಾರು ಸಮೀಪ ಪಿಜಿಯಲ್ಲಿ ವಾಸವಾಗಿರುವ ವಿದ್ಯಾರ್ಥಿಗಳನ್ನು ಅಗ್ನಿಶಾಮಕ ದಳದ ಬೋಟಿನಲ್ಲಿ ಕರೆ ತರಲಾಯಿತು. ಈ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪರೀಕ್ಷೆ ಇರುವುದರಿಂದ ಕರೆದುಕೊಂಡು ಬರಲಾಯಿತು.

ಸ್ಥಳಕ್ಕೆ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್., ನಗರಸಭೆ ಸದಸ್ಯರಾದ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!