ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ನಿಧನ
ಮಂಗಳೂರು, ಜು.8: ಉಳ್ಳಾಲ ಖಾಝಿ, ಮರ್ಹೂಂ ಶೈಖುನಾ ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ನಿಗದಿಯಾಗಿದ್ದ ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಳಗ್ಗೆ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಸಿದ್ಧರಾಗುತ್ತಿದ್ದರು. ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಖಾಝಿ ಕೂರತ್ ತಂಙಳ್ ನಿಧನ ವಾರ್ತೆ ಕೇಳಿ ತೀವ್ರ ಆಘಾತವಾಯಿತು: ಯು.ಟಿ ಖಾದರ್ ಉಳ್ಳಾಲ ಸೇರಿದಂತೆ ದ.ಕ.ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಗಳೂ ಆಧ್ಯಾತ್ಮಿಕ ನಾಯಕರೂ ನಮ್ಮೆಲ್ಲರ ಮಾರ್ಗದರ್ಶಕರೂ ಆದ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅವರ ನಿಧನ ವಾರ್ತೆ ಕೇಳಿ ತೀವ್ರ ಆಘಾತವಾಯಿತು. ಇವರು ಮರ್ಹೂಂ ಶೈಖುನಾ ಅಸ್ಸೆಯ್ಯದ್ ತಾಜುಲ್ ಉಲಮಾ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಙಳ್‌ರ ಸುಪುತ್ರರಾಗಿದ್ದಾರೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಬಹು ಸೆಯ್ಯಿದರು ನನ್ನೊಂದಿಗೆ ಮಾತನಾಡಿದ್ದರು. ಆರೋಗ್ಯವಂತರಾಗಿದ್ದ ತಂಙಳ್ ಅವರ ಹಠಾತ್ ನಿಧನ ಸಮಾಜವನ್ನು ಅತೀವ ದುಃಖಕ್ಕೆ ದೂಡಿದೆ. ರೋಗ ರುಜಿನಗಳಿಂದ, ಸಮಸ್ಯೆ ಸಂಕಷ್ಟಗಳಿಂದ ಬಳಲಿ ಬರುವವರಿಗೆ ಆಧ್ಯಾತ್ಮಿಕ ಹಾದಿಯಲ್ಲಿ ಪರಿಹಾರ ಹುಡುಕಿ ತಮ್ಮ ಬಳಿಗೆ ಬರುತ್ತಿದ್ದ ಜನರನ್ನು ರಾತ್ರಿ ಹಗಲೆನ್ನದೆ ಸಂತೈಸುತ್ತಿದ್ದ ಕೂರತ್ ತಂಙಳ್ ಅವರು ಜಾತಿ ಮತ ಭೇದವಿಲ್ಲದೆ, ಬಡವ ಧನಿಕ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಸರ್ವಶಕ್ತನಿಗೆ ಭಯಪಟ್ಟು ಬದುಕಬೇಕೆಂದು ನಿರಂತರವಾಗಿ ಸಮಾಜವನ್ನು ಬೋಧಿಸುತ್ತಿದ್ದರು.
ಸತ್ಯದ ಹಾದಿಯಲ್ಲಿ ದೃಢವಾಗಿ ನಿಲ್ಲುವ ಅವರ ವ್ಯಕ್ತಿತ್ವ ಮಾದರಿಯಾಗಿತ್ತು. ಅವರ ತಂದೆ ತಾಜುಲ್ ಉಲಮಾರವರ ವಿದಾಯದಿಂದ ದುಃಖಿತವಾದ ಸಮಾಜ ಕೂರತ್ ತಂಙಳ್ ಅವರ ನಿಧನದೊಂದಿಗೆ ಮತ್ತೊಮ್ಮೆ ತಮ್ಮ ಆಸರೆಯನ್ನು ಕಳೆದುಕೊಂಡ ದುಃಖದಲ್ಲಿದೆ ಎಂದು ಖಾದರ್ ಅವರು ಹೇಳಿದರು.
ಉಳ್ಳಾಲ ಖಾಝಿ ನಿಧನಕ್ಕೆ ಸಚಿವರ ಸಂತಾಪ
ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸರ್ವಧರ್ಮಗಳ ಸೌಹಾರ್ಧದ ಪ್ರತಿಪಾಧಕರಾಗಿದ್ದ ಅವರ ನಿಧನವು ಕರಾವಳಿ ಭಾಗದ ಜನತೆಗೆ ಅಪಾರ ನಷ್ಟವುಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು, ಸಾಮರಸ್ಯಕ್ಕಾಗಿ ದುಡಿದ ಉಳ್ಳಾಲ ಖಾಝಿ ಸದಾ ಸಮಾಜದ ಸರ್ವರಿಗೂ ಒಳಿತು ಬಯಸುತ್ತಿದ್ದ ಹಿರಿಯ ಚೇತನವಾಗಿದ್ದರು.ಮೃತರ ಅನುಯಾಯಿ ಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಡುಪಿ ಶೇಕ್ ವಾಹಿದ್ ಸಂತಾಪ ಉಳ್ಳಾಲ ಖಾಝಿ ಖ್ಯಾತ ಮುಸ್ಲಿಂ ಧರ್ಮಗುರುಗಳಾಗಿರುವ ಕೂರ ತಂಜಳ್ ಎಂದೇ ಹೆಸರುವಾಸಿಯಾಗಿದ್ದ ಕೂರತ್ ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಜಳ್ ರವರ ನಿಧನಕ್ಕೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಡುಪಿ ಶೇಕ್ ವಾಹಿದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಆಧ್ಯಾತ್ಮಿಕ ಪಂಡಿತರಾಗಿ ಜನರ ನೋವು ಸಂಕಷ್ಟಕ್ಕೆ ಆಧ್ಯಾತ್ಮಿಕ ಪರಿಹಾರ ನೀಡುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿಯ ಗುರುಗಳಾಗಿ ಅಪಾರ ಹೆಸರುಗಳಿಸಿದ್ದರು. ಇವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಜಾತಿ, ಮತ, ಧರ್ಮಬೇಧವಿಲ್ಲದೆ ಎಲ್ಲರಿಗೂ ಆಶೀರ್ವಾದ ನೀಡುತ್ತಿದ್ದರು. ಇವರ ಅಗಲುವಿಕೆ ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಶೇಕ್ ವಾಹಿದ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ಶರ್ಫುದ್ದೀನ್ ಶೇಖ್- ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ– ಸಂತಾಪ
ನಮ್ಮೆಲ್ಲರ ಮಾರ್ಗದರ್ಶಕರೂ,ಧಾರ್ಮಿಕ ಪಂಡಿತರೂ,ಸಮಸ್ತ ಕೇರಳ ಜಮೀಯುತುಲ್ ಉಲಮಾಕೇಂದ್ರ ಮುಷಾವರ ಸದಸ್ಯರು,ಕರ್ನಾಟಕ ಮುಸ್ಲೀಂ ಜಮಾತ್ ರಾದ್ಯ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಜಿಯಾದ ಸಯ್ಯದ್ ಫಝಲ್ ಅಲ್ ಬುಖಾರಿ ಕೂರತ್ ತಂಞಲ್ ಇವರ ನಿಧನ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ.ಎಲ್ಲಾ ದರ್ಮದವರನ್ನು ಗೌರವಿಸುತ್ತಾ ಹಲವಾರು ಸಮಾಜ ಕಲ್ಯಾಣದಂತಹ ನಾಡಿಗೆ ಕಾರ್ಯಕ್ರಮಗಳನ್ನು ನೀಡುತ್ತಾ, ಬಡ ಮಕ್ಕಳಿಗೆ ಆಸರೆಯಾಗಿ ನಾಡಿನ ಎಲ್ಲಾ ವರ್ಗದ ಜನರಿಗೆ ಒಳ್ಳೆಯದನ್ನು ಬಯಸುತ್ತಿದ್ದರು ಅವರ ಮಾರ್ಗದರ್ಶನ ಪಡೆದು ಸಾವಿರಾರು ಮಂದಿ ಯಶ್ವಿಯಾಗಿದ್ದಾರೆ .ನಾನು ಸಹ ಅವರ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಆಶೀರ್ವಾದಗಳನ್ನು ಪಡೆದಿದ್ದೆ.ಅದೆಷ್ಟೊ ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದ ತಂಞಲ್ ರವರ ಮರಣ ಅವರ ಅನುಯಾಯಿಗಳಿಗೆ ಆಘಾತ ಉಂಟಾಗಿದೆ.