ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ
ಕುಂದಾಪುರ, ಜು.8: ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಭಾನುವಾರ ಮಧ್ಯಾಹ್ನದಿಂದ ಸೋಮವಾರ ಮುಂಜಾನೆವರೆಗೆ ವಿಪರೀತ ಮಳೆಯಾಗುತ್ತಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 42.2 ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 39.8ಮಿ.ಮೀ., ಕುಂದಾಪುರ- 42.0 ಮಿ.ಮೀ., ಉಡುಪಿ- 47.5ಮಿ.ಮೀ., ಬೈಂದೂರು- 37.8ಮಿ.ಮೀ., ಬ್ರಹ್ಮಾವರ- 43.8ಮಿ.ಮೀ., ಕಾಪು- 43.1ಮಿ.ಮೀ., ಹೆಬ್ರಿ- 46.9 ಮಿ.ಮೀ. ಮಳೆಯಾಗಿದೆ.
ಹೆದ್ದಾರಿಯಲ್ಲಿ ಕಂಟಕ: ಕುಂದಾಪುರ-ಬೈಂದೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಪರಿಸ್ಥಿತಿ ಅಯೋಮಯವಾಗಿದ್ದು ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿದೆ.
ಪ್ರಮುಖವಾಗಿ ಕುಂದಾಪುರದ ಬಸ್ರೂರು ಮೂರುಕೈ ಬಳಿಯ ಟಿ.ಟಿ ರಸ್ತೆ ಸರ್ವಿಸ್ ರಸ್ತೆಗಳಲ್ಲಿ ಮೊಣಕಾಲೆತ್ತರಕ್ಕೆ ಮಳೆ ನೀರು ನಿಲ್ಲುತ್ತಿದ್ದು ಹೊಂಡ- ಗುಂಡಿಗಳು ನಿರ್ಮಾಣವಾಗಿದೆ. ಕೋಟೇಶ್ವರ, ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಟ ಭಾಗದಲ್ಲಿಯೂ ಹೆದ್ದಾರಿಯಲ್ಲಿ ಮಳೆ ನೀರು ಸಮಸ್ಯೆ, ಗುಂಡಿಗಳು ನಿರ್ಮಾಣವಾಗಿವೆ
ಇನ್ನು ಕುಂದಾಪುರದಿಂದ ಬೈಂದೂರು ಭಾಗದ ಹೆದ್ದಾರಿಯಲ್ಲೂ ಅಲ್ಲಲ್ಲಿ ಕೃತಕ ಕೆರೆ ಸಹಿತ ಹೊಂಡಗಳು ಸೃಷ್ಟಿಯಾಗಿ ಸುಗಮ ಸಂಚಾರಕ್ಕೆ ಅನಾನುಕೂಲ ವಾಗುತ್ತಿದೆ. ಘನ ವಾಹನಗಳು ತೆರಳುವಾಗ ಮಳೆ ನೀರಿಂದಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳ ಸಹಿತ ಲಘು ವಾಹನ ಸವಾರರು ಪರದಾಡ ಬೇಕಾಗಿದೆ.
ಇಳಿದ ನೆರೆ: ನಾವುಂದ-ಸಾಲ್ಬುಡದಲ್ಲಿ ಇತ್ತೀಚೆಗೆ ವ್ಯಾಪಕ ಮಳೆಯಿಂದ ನೆರೆ ಸೃಷ್ಟಿಯಾಗಿತ್ತು. ಒಂದೇ ದಿನದಲ್ಲಿ ನೆರೆ ನೀರಿನ ಪ್ರಮಾಣ ಇಳಿಕೆಯಾಗಿ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂದಿದೆ. ರಸ್ತೆ ಸಂಪರ್ಕ ಸಹಜವಾಗಿ ಸುಗಮವಾಗಿದ್ದು ಬಹಳಷ್ಟು ಕೃಷಿ ಹಾನಿಯಾದ ಬಗ್ಗೆ ವರದಿಯಾಗಿದೆ.