ಉಡುಪಿ ತುಳುಕೂಟ: ‘ಮದರೆಂಗಿದ ರಂಗ್’ ತುಳು ಸಾಂಪ್ರದಾಯಿಕ ಸ್ಪರ್ಧೆ
ಉಡುಪಿ ಜು.6(ಉಡುಪಿ ಟೈಮ್ಸ್ ವರದಿ): ತುಳುಕೂಟ ಉಡುಪಿ ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ತುಳು ಸಾಂಪ್ರದಾಯಿಕ ಸ್ಪರ್ಧೆ ‘ಮದರೆಂಗಿದ ರಂಗ್’ನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮಲ್ಪೆ ಪರ್ಸಿನ್ ಮೀನುಗಾರರ ಸಂಘದದ ಅಧ್ಯಕ್ಷೆ ನಾಗರಾಜ್ ಸುವರ್ಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಮಾತನಾಡಿ, ತುಳುನಾಡಿನ ಕಲೆ, ಸಂಸ್ಕೃತಿ, ಭಾಷೆಯ ಮಹತ್ವವನ್ನು ಮಕ್ಕಳಿಗೆ ಹೇಳಿ ಕೊಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಇಲಾಖೆ, ಸರಕಾರದಿಂದ ಮಾತ್ರ ತುಳು ಭಾಷೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ತುಳು ಸಂಘಟನೆಗಳಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತುಳುವನ್ನು ಉಳಿಸಿ ಬೆಳೆಸ ಬಹುದಾಗಿದೆ ಎಂದರು.
ಈ ವೇಳೆ ಸಂದರ್ಭದಲ್ಲಿ ವೈದ್ಯೆ ಡಾ.ಶ್ರುತಿ ಬಲ್ಲಾಳ್ ಅವರನ್ನು ಗೌರವಿಸಲಾಯಿತು. ಬಳಿಕ ಪೀಂಪಿರಿ ಊದುವ, ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯುವ, ಮದರಂಗಿ, ಔಷಧದ ಎಲೆಯ ಹೆಸರು ಬರೆಯುವ, ತೆಂಗಿನ ಗರಿಯಲ್ಲಿ ಆಟಿಕೆ ತಯಾರಿಸುವ, ಕೇಶಾಲಂಕಾರ, ಮುಂಡಾಸು ಕಟ್ಟುವ, ಹೂ ಕಟ್ಟುವ, ಜಲ್ಲಿ ಬಿಡಿಸುವ, ಬತ್ತಿ ಕಟ್ಟುವ, ಹೂ ಜೋಡಣೆ ಸ್ಪರ್ಧೆಗಳು ಮತ್ತು ತುಳು ರಸಪ್ರಶ್ನೆ ಮತ್ತು ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಗಳು ನಡೆದವು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಫರ್ಝಾನಾ ಎಂ., ಉದ್ಯಮಿ ರಮಿತಾ ಶೈಲೇಂದ್ರ ಕಾರ್ಕಳ, ಕಾರ್ಯಕ್ರಮದ ಸಂಚಾಲಕಿ ಯಶೋಧ ಕೇಶವ, ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಪ್ರಕಾಶ್ ಸುವರ್ಣ ಕಟಪಾಡಿ ಹಾಗೂ ಶಿಲ್ಪಾ ಜೋಶಿ ಉಪಸ್ಥಿತರಿದ್ದರು.