ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಕೃಷಿಕರ ಅವಗಣನೆಗೆ ಕೃಷಿಕ ಸಂಘ ಖೇದ
ಉಡುಪಿ: ಕೃಷಿಕರು ದೇಶದ ಬೆನ್ನೆಲುಬು, ಅವರಿಂದಾಗಿಯೇ ದೇಶದ ಜನತೆಯ ಹಸಿವು ನೀಗಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರದಷ್ಟು ಮಹತ್ವದ್ದು ಬೇರೆ ಯಾರದ್ದೂ ಇಲ್ಲ ಎಂದು ವೇದಿಕೆ ಸಿಕ್ಕಾಗಲೆಲ್ಲ ಆಡಳಿತ ನಡೆಸುವವರು, ರಾಜಕಾರಣಿಗಳು ಅಧಿಕಾರಿಗಳು ಗಂಟಲು ಹರಿದು ಹೋಗುವಂತೆ ಕೃಷಿಕರನ್ನು ಹೊಗಳಿ ಅಟ್ಟಕ್ಕೇ ಏರಿಸುತ್ತಾರೆ.
ಆದರೆ ಸರಕಾರಿ ಪ್ರಾಯೋಜಿತ ಸನ್ಮಾನ, ಪ್ರಶಸ್ತಿಯಂತಹ ಸಂದರ್ಭಗಳಲ್ಲಿ ಮಾತ್ರ ಕೃಷಿಕರು ಯಾವ ಲೆಕ್ಕಕ್ಕೂ ಇಲ್ಲ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿಕೆಯಲ್ಲಿ ಉಡುಪಿ ಜಿಲ್ಲಾಡಳಿತ ಎಲ್ಲ ಕ್ಷೇತ್ರದ ಸಾಧಕರನ್ನು ಗುರುತಿಸಿದೆ. ಆದರೆ ಕೃಷಿ ಕ್ಷೇತ್ರದ ಸಾಧಕರು ಜಿಲ್ಲೆಯಲ್ಲಿ ಯಾರೊಬ್ಬರೂ ಗಮನಕ್ಕೆ ಬಾರದಿರುವುದು ಆಶ್ಚರ್ಯಕರ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಖೇದ ವ್ಯಕ್ತ ಪಡಿಸಿದ್ದಾರೆ.
ಶ್ರಮಿಕರ ವರ್ಗದಲ್ಲೇ ಇರುವ ಕೃಷಿಕರು ಉಳಿದವರಂತೆ ನಿರ್ದಿಷ್ಟ ಸಮಯ, ದಿನವೆಂದು ನಿಗದಿ ಮಾಡಿಕೊಂಡು ದುಡಿಯುವವರಲ್ಲ. ಬದಲಾಗಿ ಯಾರನ್ನೂ ಕಾಯದೆ, ಯಾವ ಹೊಗಳಿಕೆ ಬಯಸದೆ ದಿನಪೂರ್ತಿ ತಮ್ಮ ಕೃಷಿಕಾರ್ಯದಲ್ಲಿ ತೊಡಗಿಕೊಳ್ಳುವವರು. ಅವರ ಶ್ರಮವನ್ನು ಆಡಳಿತ ನಡೆಸುವ ಯಾರು ಕೂಡ ನಿರ್ಲಕ್ಷಿಸುವಂತಿಲ್ಲ ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ರಾಮಕೃಷ್ಣ ಶರ್ಮ ಟೀಕಿಸಿದ್ದಾರೆ.