ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಿಸಿದ ರಾಜ್ಯ ಸರ್ಕಾರ
ಬೆಂಗಳೂರು: ನಗರದ 11 ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಬೈಕ್ ಟ್ಯಾಕ್ಸಿಯಿಂದಾಗಿ ರಾಜ್ಯದಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಸೇರಿದಂತೆ ಎಲ್ಲಾ ಮಾದರಿಯ ಪ್ರಯಾಣಿಕರ ಬಾಡಿಗೆ ವಾಹನಗಳಿಗೆ ಭಾರಿ ಹೊಡೆತ ಬೀಳುತ್ತಿತ್ತು. ವಿರೋಧದ ನಡುವೆಯೂ, ರ‍್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿಗಳು ಸಂಚಾರ ಮಾಡುತ್ತಿವೆ. ಆದರೆ, ಕಳೆದ 2021ರಲ್ಲಿ ಆಟೋ, ಟ್ಯಾಕ್ಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘಟನೆಯ ವತಿಯಿಂದ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ಖಾಸಗಿ ಸಾರಿಗೆ ವಾಹನಗಳ ಸಂಘಟನೆಯಿಂದ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗಿತ್ತು.
ಒಕ್ಕೂಟದ ಸದಸ್ಯರು ಶಾಂತಿನಗರ ಕಚೇರಿಯಲ್ಲಿ ಸಾರಿಗೆ ಆಯುಕ್ತ ಯೋಗೇಶ್ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರು, ಇಲಾಖೆ ನೀಡಿದ ಭರವಸೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ನ ನೂರಾರು ಆಟೋ ಮತ್ತು ಕ್ಯಾಬ್ ಚಾಲಕರು ಕಚೇರಿಯ ಹೊರಗೆ ಧರಣಿ ಕುಳಿತು ಸಾರಿಗೆ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಕೆಲ ಸಮಯದ ನಂತರ ಸಾರಿಗೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ನೀಡಲು ಸದಸ್ಯರಿಗೆ ಅವಕಾಶ ನೀಡಲಾಯಿತು.
ಫೆಡರೇಶನ್‌ನ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಯಾವುದೇ ಅವಕಾಶವಿಲ್ಲ. ಇ-ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅವಕಾಶ ನೀಡುವ ನೀತಿಯನ್ನು ತಂದ ರಾಜ್ಯ ಸರ್ಕಾರವು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಈ ವರ್ಷದ ಆರಂಭದಲ್ಲಿ ಅದನ್ನು ಹಿಂತೆಗೆದುಕೊಂಡಿತು. ಇದರ ಹೊರತಾಗಿಯೂ, ನೂರಾರು ವೈಟ್ ಬೋರ್ಡ್ ವಾಹನಗಳು ರಾಪಿಡೋದಂತಹ ಖಾಸಗಿ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದು, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಇವುಗಳ ವಿರುದ್ಧ ಕ್ರಮಕ್ಕೆ ನಗರದಾದ್ಯಂತ 1 ತಂಡಗಳನ್ನು ಸಾರಿಗೆ ಇಲಾಖೆ ರಚಿಸಿದೆ ಎಂದು ಹೇಳಿದರು.
ಪ್ರತಿಭಟನೆ ಬೆನ್ನಲ್ಲೇ ಸಾರಿಗೆ ಇಲಾಖೆ ಆಯುಕ್ತರು ರಾಜ್ಯಾದ್ಯಂತ ನಾಳೆಯಿಂದ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಿದ್ದಾರೆ.
ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ 10 ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳ ವಿಶೇಷ ತಂಡಗಳನ್ನು ರಚಿಸುವಂತೆಯೂ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ನೋಂದಾಯಿತ ಕಂಪನಿಗಳಾದ ರ‍್ಯಾಪಿಡೋ, ಓಲಾ ಹಾಗೂ ಉಬರ್ ಬೈಕ್ ಟ್ಯಾಕ್ಸಿಗಳು ಹೊರತಾಗಿ ಅನಧಿಕೃತವಾಗಿ ನೋಂದಣಿ ಮಾಡಿಕೊಳ್ಳದೇ ಪಿಕಪ್, ಡ್ರಾಪ್ ಮಾಡುವ ಬೈಕ್ ಟ್ಯಾಕ್ಸಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದಾರೆ.