ಬ್ರಹ್ಮಾವರ: ಯಕ್ಷಗಾನದ ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್ ಇನ್ನಿಲ್ಲ
ಉಡುಪಿ: ಪ್ರಸಿದ್ಧ ಯಕ್ಷಗಾನ ವೇಷ ಭೂಷಣ ತಯಾರಕ ಹಂದಾಡಿ ಬಾಲಕೃಷ್ಣ ನಾಯಕ್(76) ಅವರು ಜು.4ರಂದು ನಿಧನ ಹೊಂದಿದ್ದಾರೆ.
ಖ್ಯಾತನಾಮರಾದ ಹಂದಾಡಿ ಸುಬ್ಬಣ್ಣ ಭಟ್ಟರ ತಂಡದಲ್ಲಿ ಬಾಲ್ಯದಲ್ಲೇ ಗುರುತಿಸಿಕೊಂಡು ಯಕ್ಷಗಾನ ವೇಷ ಭೂಷಣ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು. ಬಳಿಕ ಮಾವ ದೇವೇಂದ್ರ ನಾಯಕರ ತಂಡದಲ್ಲಿ ತೊಡಗಿಕೊಂಡರು. 1990ರಲ್ಲಿ ಶ್ರೀ ಗಜಾನನ ಯಕ್ಷಗಾನ ವೇಷ ಭೂಷಣ ತಯಾರಿಕಾ ಸಂಸ್ಥೆ ಪ್ರಾರಂಭಿಸಿ ಕೊನೆಯವರೆಗೂ ಸೇವೆ ನೀಡುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.
ನೂರಾರು ಯಕ್ಷಗಾನ ಸಂಘ ಸಂಸ್ಥೆಗಳು, ಸಾವಿರಾರು ಯಕ್ಷಗಾನ ಹವ್ಯಾಸಿ ಕಲಾವಿದರಿಗೆ ಬಣ್ಣ ಹಚ್ಚಿ, ವೇಷಭೂಷಣ ಕಟ್ಟಿರುವ ಖ್ಯಾತಿ ಬಾಲಕೃಷ್ಣ ನಾಯಕ್ ಅವರದ್ದಾಗಿದೆ. ಪರಂಪರೆಯ ಮುಖವರ್ಣಿಕೆ ಗುಟ್ಟು ಬಲ್ಲವರಾಗಿದ್ದರು. ಪ್ರಸಂಗಕ್ಕೆ ಅನುಗುಣವಾಗಿ ವೇಷಗಳನ್ನು ಸಿದ್ದಪಡಿಸಿ ರಂಗಕ್ಕೆ ಕಳುಹಿಸುವಲ್ಲಿ ನುರಿತವರಾಗಿದ್ದರು.ಕರ್ನಾಟಕ ಸರಕಾರದ ಯಕ್ಷಗಾನ ಅಕಾಡೆಮಿಯ ಕಲಾಸಿರಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಕಲಾರಂಗ, ಬೆಂಗಳೂರಿನ ರಂಗಸ್ಥಳ, ಕರ್ನಾಟಕ ಕಲಾದರ್ಶಿನಿ, ಅಜಪುರ ಯಕ್ಷಗಾನ ಸಂಘದ ದತ್ತಿನಿಧಿ ಪ್ರಶಸ್ತಿ ಸಹಿತ ನೂರಾರು ಸಮ್ಮಾನಗಳಿಗೆ ಪಾತ್ರರಾಗಿದ್ದ ರು. ಹಂದಾಡಿ ಶ್ರೀನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಶ್ರೀ ಬೊಬ್ಬರ್ಯ ಪರಿಹಾರ ದೇವಸ್ಥಾನ ಆಡಳಿತ ಸಮಿತಿ, ಶ್ರೀರಾಮ ಭಜನ ಮಂಡಳಿಯ ಅಧ್ಯಕ್ಷರಾಗಿದ್ದರು.
ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ (ಜು.05) ಪೂರ್ವಾಹ್ನ 10.00 ಗಂಟೆಗೆ ಬ್ರಹ್ಮಾವರದಲ್ಲಿ ಜರಗಲಿದೆ.