ಉಡುಪಿ ಜಿಲ್ಲೆಯಾದ್ಯಂತ ಭಾರೀ ಸುಂಟರಗಾಳಿ- ನೂರಾರು ಮನೆ, ತೋಟಗಾರಿಕಾ ಬೆಳೆ ಧರೆಗೆ
ಉಡುಪಿ: ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬೀಸಿದ ಸುಂಟರಗಾಳಿಗೆ ಹಲವು ಮನೆ, ಅಡಿಕೆ, ರಬ್ಬರ್ ಸಹಿತ ಸಾವಿರಾರು ತೋಟಗಾರಿಕಾ ಬೆಳೆಗಳು ನಾಶವಾಗಿ ಲಕ್ಷಾಂತರ ರೂ. ನಷ್ಟವಾದ ಬಗ್ಗೆ ವರದಿಯಾಗಿದೆ.
ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಭಾರೀ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನ ರಟ್ಟಾಡಿ ಗ್ರಾಮದ ಬಾಲಕೃಷ್ಣ ನಡಬೂರು ಇವರ 50 ಅಡಿಕೆ ಮರ ಹಾನಿಗೊಂಡಿದ್ದರೆ, ರಾಜೀವ ನಡಬೂರು ಇವರ 100ಕ್ಕೂ ಅಧಿಕ ಅಡಿಕೆ ಮರ ತುಂಡಾಗಿ ನೆಲಕ್ಕುರುಳಿದೆ.
ಮಹೇಶ ನಡಬೂರು ಇವರ ಮನೆಯ ಮಾಡಿನ 30ಕ್ಕೂ ಅಧಿಕ ಹೆಂಚುಗಳು ಗಾಳಿಗೆ ಹಾರಿಹೋಗಿದ್ದರೆ ಮಾಡಿನ ದೊಂಬೆ ಹಾನಿಗೊಂಡಿದೆ. ಯಲ್ಲ ನಡಬೂರು ಇವರ 50 ಅಡಿಕೆ ಮರ, ಅಮಾಸೆಬೈಲು ಗ್ರಾಮದ ಕುರುಬಲಮಕ್ಕಿಯ ದ್ಯಾವ ಪೂಜಾರಿ ಇವರ 70 ಅಡಿಕೆ ಮರ ಹಾಗೂ ಎರಡು ತೆಂಗಿನನ ಮರ ತುಂಡಾಗಿ ನೆಲಕ್ಕೆ ಉರುಳಿದೆ.
ಅಮಾಸೆಬೈಲು ಜಡ್ಕಿನಗದ್ದೆ ಬಸವ ಪೂಜಾರಿ ಇವರ 60 ಅಡಿಕೆ ಮರ, ಎರಡು ತೆಂಗಿನ ಮರಗಳು ಹಾಗೂ ಅಮಾಸೆ ಬೈಲು ಹೆದ್ದಾರಿಗದ್ದೆಯ ತೇಜ ಕುಲಾಲರ 40ಕ್ಕೂ ಅಧಿಕ ಅಡಿಕೆ ಮರಗಳಿಗೆ ಸಂಪೂರ್ಣ ಹಾನಿಯಾಗಿದೆ. ರಟ್ಟಾಡಿ ಗ್ರಾಮದ ಮಹಾಬಲ ಕಾನ್‌ಬೈಲು ಇವರ ಮನೆಯ ಮಾಡಿನ ತಗಡು ಹಾಗೂ ಸಿಮೆಂಟ್ ಶೀಟುಗಳು ಹಾರಿಹೋಗಿವೆ.
ರಟ್ಟಾಡಿಯ ನರಸಿಂಹ ನಡಬೂರು ಇವರ ನಿರ್ಮಾಣ ಹಂತದ ದನದ ಕೊಟ್ಟಿಗೆ ಮೇಲ್ಚಾವಣಿಯ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ. ಹುಂತ್ರಿಕೆಯ ವಸಂತ ಶೆಟ್ಟಿ ಅವರ 70 ಅಡಿಕೆ ಮರ, ಕತ್ಕೋಡು ನಾಗರಾಜ ಪ.ಜಾತಿ ಇವರ ಮನೆಯ ಮೇಲೆ ತೆಂಗಿನ ಮರ ಹಾಗೂ ಸಾಗುವಾನಿ ಮರ ಬಿದ್ದು ಮನೆ ಸಂಪೂರ್ಣ ದ್ವಂಸಗೊಂಡಿದೆ.
ಮನೆ-ಕೊಟ್ಟಿಗೆಗೆ ಹಾನಿ: ರಟ್ಟಾಡಿ ತೆಂಕಮಕ್ಕಿಯ ಗೋವಿಂದ ಪೂಜಾರಿ ಅವರ 140 ಅಡಿಕೆ ಮರ, ಮನೆ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಮಾಡಿನ ಹೆಂಚು ಗಾಳಿಗೆ ಹಾರಿಹೋಗಿವೆ. ರೇಖಾನಾಥ ರೈ ಅವರು 400 ಅಡಿಕೆ ಮರಗಳು, ತೆಂಕೂರು ಗಣೇಶ ಶೆಟ್ಟಿ ಇವರ 200 ಅಡಿಕೆ ಮರ ಹಾಗೂ ಪಂಪುಸೆಟ್ ಶೆಡ್‌ಗೆ ಹಾನಿಯಾಗಿದೆ. ರಾಕೇಶ್ ಶೆಟ್ಟಿ ಇವರ 150 ಅಡಿಕೆ ಮರ ಧರಾಶಾಹಿಯಾಗಿವೆ.
ಸಂಪೂರ್ಣ ತೋಟ ಹಾನಿ: ಹೊರ್ಲಿಜೆಡ್ಡಿನ ಬಾಲಕೃಷ್ಣ ಶೆಟ್ಟಿ ಇವರ 1000 ಅಡಿಕೆ ಮರ, 15 ತೆಂಗಿನ ಮರ, 5 ಹಲಸಿನ ಮರ, 8ಮಾವಿನ ಮರ, 50ಗೇರುಮರ ಹಾಗೂ 50 ರಬ್ಬರ್ ಮರ ಸೇರಿ ತೋಟಕ್ಕೆ ಸಂಪೂರ್ಣ ಹಾನಿಯಾಗಿದೆ. ತೆಂಕೂರು ಮಹೇಶ್ಚಂದ್ರ ಶೆಟ್ಟಿ ಇವರ 250 ಅಡಿಕೆ ಮರ, 25 ತೆಂಗಿನ ಮರ, ಪಂಪುಸೆಟ್ ಶೆಡ್ ಹಾನಿಯಾಗಿದ್ದರೆ, ಚಂದ್ರಶೇಖರ ಶೆಟ್ಟಿ ಇವರ 250 ಅಡಿಕೆ ಮರ ಹಾಗೂ ವಾಸದ ಮನೆಗೆ ಭಾಗಶ: ಹಾನಿಯಾಗಿದೆ.
ಹೊರ್ಲಿಜೆಡ್ಡಿನ ಮಂಜುನಾಥ ಮಡಿವಾಳ ಇವರ ವಾಸ್ತವ್ಯದ ಮನೆ, ದನದ ಕೊಟ್ಟಿಗೆ ಹಾಗೂ ಕಟ್ಟಡಕ್ಕೆ ಹಾನಿಯಾಗಿದ್ದರೆ, ಕೃಷ್ಣಯ್ಯ ಆಚಾರಿ ಅವರ ಮನೆಯ 50ಕೂ ಅಧಿಕ ಹೆಂಚು,40 ದೊಂಬೆ ಹಾಗೂ ತಗಡು ಶೀಟು ಗಾಳಿಗೆ ಹಾರಿಹೋಗಿವೆ. ಗ್ರಾಮದ ಇನ್ನೂ ಹತ್ತಾರು ಮನೆಗಳು ಹಾಗೂ ತೋಟಗಳಿಗೆ ವಿವಿಧ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ಕುಂದಾಪುರ ತಹಶೀಲ್ದಾರರು ತಿಳಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಹೊಸೂರಿನಲ್ಲಿ ಗಾಳಿ-ಮಳೆಗೆ ಅಪಾರ ಹಾನಿ
ಇಂದು ಮುಂಜಾನೆ ಬೀಸಿದ ಗಾಳಿ-ಮಳೆಯಿಂದ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಇಲ್ಲಿನ 12ಕ್ಕೂ ಅಧಿಕ ಮನೆಗಳು ಇದರಿಂದ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಜಗದೀಶ್ ಎಂಬವರ ಮನೆ ಮೇಲೆ ಮರ ಬಿದ್ದು ಒಂದು ಲಕ್ಷ ರೂ., ದಯಾನಂದ ನಾಯಕ್ ಇವರ ಮನೆಯ ಮೇಲ್ಚಾವಣಿಗೆ ಭಾಗಶ: ಹಾನಿಯಾಗಿ ಒಂದೂವರೆ ಲಕ್ಷ, ಅದೇ ರೀತಿ ಸದಾನಂದ ನಾಯಕ್, ರಾಘವೇಂದ್ರ ಹಾಗೂ ಪರಮೇಶ್ವರ ಇವರ ಮನೆಯ ಮೇಲ್ಚಾವಣಿಗೆ ತಲಾ ಒಂದೂವರೆ ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಉಳಿದಂತೆ ಸುರೇಶ್ ಸಾವಂತ್, ಸಂತೋಷ್ ಸಾವಂತ್, ಗೋವಿಂದ ಸೇರ್ವೆಗಾರ್, ಕೇಶವ, ಸೀತಾರಾಮ ಸೇರ್ವೆಗಾರ, ರವಿ ಸೇರ್ವೆಗಾರ, ಶ್ರೀನಿವಾಸ ಸೇರ್ವೆಗಾರ, ಶ್ರೀನಿವಾಸ, ಸೋಮಯ್ಯ ಅಲ್ಲದೇ ಯಡ್ತಾಡಿ ಗ್ರಾಮದ ಚಂದ್ರಶೇಖರ್ ಇವರ ಮನೆಗಳಿಗೆ 40,000 ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸುರೇಶ್ ಮೂಲ್ಯ ಇವರ ಮನೆ ಮೇಲೆ ಮರ ಬಿದ್ದು, ಉಡುಪಿ ತಾಲೂಕು ಕಡೆಕಾರು ಗ್ರಾಮದ ಸರಸು ಸುವರ್ಣ, ವಿದ್ಯಾವತಿ, ದಿವಾಕರ ಶೆಟ್ಟಿ, ಶಿವಳ್ಳಿ ಗ್ರಾಮದ ಸುಮಿತ್ರ, ಮುತ್ತಯ್ಯ, ಪುತ್ತೂರು ಗ್ರಾಮದ ದೇವೇಂದ್ರನಾಯಕ್ ಇವರ ಮನೆಗಳಿಗೂ ಹಾನಿಯಾದ ವರದಿ ಬಂದಿದೆ.
ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಗ್ರಾಮದ ಸುಮಂತ್, ಬೀಜಾಡಿಯ ರಾಮಚಂದ್ರ ಸೇರಿಗಾರ್, ಕುಂಭಾಶಿಯ ಚಂದ್ರಶೇಖರ ಆಚಾರ್ಯ, ಕೊರ್ಗಿಯ ಚಿಕ್ಕು, ಕುಳಂಜೆಯ ಸುಬ್ಬಣ್ಣ ನಾಯ್ಕ್, ಕೆದೂರಿನ ರತ್ನ ಮೊಗೇರ್ತಿ ಇವರ ಮನೆ ಗಳಿಗೂ ವಿವಿಧ ಪ್ರಮಾಣಗಳಲ್ಲಿ ಹಾನಿಯಾಗಿದ್ದು ಲಕ್ಷಾಂತರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿಯಲ್ಲಿ 34.0ಮಿ.ಮೀ.ಮಳೆ
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 34.0ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 50.0ಮಿ.ಮೀ., ಹೆಬ್ರಿಯಲ್ಲಿ 42.4,ಬೈಂದೂರಿನಲ್ಲಿ 34.3, ಬ್ರಹ್ಮಾವರದಲ್ಲಿ 30.4, ಉಡುಪಿಯಲ್ಲಿ 26.4, ಕಾರ್ಕಳದಲ್ಲಿ 20.1 ಹಾಗೂ ಕಾಪುವಿನಲ್ಲಿ 14.8ಮಿ.ಮೀ. ಮಳೆಯಾಗಿದೆ.
ಮೆಸ್ಕಾಂಗೆ 10.26 ಲಕ್ಷ ರೂ. ನಷ್ಟ
ಉಡುಪಿ ಜಿಲ್ಲೆಯಾದ್ಯಂತ ಬೀಸಿದ ಬಾರೀ ಸುಂಟರಗಾಳಿಗೆ ಮೆಸ್ಕಾಂಗೆ ಸಂಬಂಧಿಸಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಗಾಳಿಯಿಂದ ಜಿಲ್ಲೆಯಲ್ಲಿ ಸುಮಾರು 60 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದ್ದು, ಐದು ಟ್ರಾನ್ಸ್‌ಫಾರ್ಮರ್‌ಗಳಿಗೆ ಮತ್ತು 1.3ಕಿ.ಮೀ. ಉದ್ದದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಕಡೆಕಾರಿನಲ್ಲಿ ಬೀಸಿದ ಸುಂಟರ ಗಾಳಿಗೆ ಸುಮಾರು 11 ವಿದ್ಯುತ್ ಕಂಬಗಳು ಧರೆಶಾಹಿಯಾಗಿದೆ. ಇದರಿಂದ ಮೆಸ್ಕಾಂಗೆ ಒಟ್ಟು 10.26ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ ತಾಲೂಕು ತಹಶೀಲ್ದಾರ್ ಶುಭಲಕ್ಷ್ಮೀ ಅವರು ಕಂದಾಯ ಇಲಾಖೆ, ಮೆಸ್ಕಾಂ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರಟ್ಟಾಡಿ, ಅಮಾಸೆಬೈಲು ಗ್ರಾಮಗಳಲ್ಲಿ ಹಾನಿಗೊ ಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸಂತ್ರಸ್ಥರನ್ನು ಭೇಟಿಯಾಗಿ ಶೀಘ್ರವೇ ಪರಿಹಾರ ನೀಡಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರೂ ಬಿರುಗಾಳಿಯಿಂದ ಹಾನಿಗೊಳಗಾದ ಉಡುಪಿ ವಿಧಾನಸಭಾ ಕ್ಷೇತ್ರದ ಕಡೆಕಾರು, ಕರ್ಜೆ ಗ್ರಾಮದ ಕುರ್ಪಾಡಿಯ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಸಂತ್ರಸ್ಥರಿಗೆ ಶೀಘ್ರವೇ ಗರಿಷ್ಠ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಪೂರ್ವನಿಗದಿತ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಲ್ಲಿರುವ ನಾನು ನಾಳೆ ಬೆಳಗ್ಗೆ ಅಧಿಕಾರಿಗಳೊಂದಿಗೆ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.