ಪೆನ್ ಡ್ರೈವ್ ಪ್ರಕರಣ: 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?
ಬೆಂಗಳೂರು: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಪ್ರಕರಣವು ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಪ್ರತೀ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆಗೆ ಒಳಪಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ ಎನ್ನಲಾಗಿದೆ.
ಪ್ರಜ್ವಲ್ ಹಲವು ಮಹಿಳೆಯರ ಜತೆಗೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಆರೋಪಕ್ಕೆ ಈ ಅಂಶ ಪುಷ್ಟಿ ನೀಡುವಂತಿದೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಹಿಂದಿನ ಚಟುವಟಿಕೆ ಬಗ್ಗೆ ಕೆದಕಿದಾಗ ಈ ವಿಚಾರ ಮುನ್ನೆಲೆಗೆ ಬಂದಿದೆ.ಪ್ರಜ್ವಲ್ ವಿರುದ್ಧ ಸಾಲು-ಸಾಲು ದೂರುಗಳು ದಾಖಲಾಗುತ್ತಿದ್ದಂ ತೆ ಅವರದ್ದು ಎನ್ನಲಾದ ಸದ್ಯ ವೈರಲ್ ಆಗಿರುವ ವೀಡಿಯೋಗಳ ಕುರಿತ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ. ಈ ಸಂಬಂಧ ಕೆಲವೊಂದು ತಾಂತ್ರಿಕ ಸಾಕ್ಷ್ಯದ ಜಾಡು ಹಿಡಿದು ಹೋದಾಗ ಪ್ರಜ್ವಲ್ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆ ನಡೆಸುತ್ತಿದ್ದ ಸಂಗತಿ ಕಂಡು ಬಂದಿದೆ.
ಆದರೆ ಪ್ರಜ್ವಲ್ ವಿರುದ್ಧ ದಾಖಲಾಗಿರುವ 5 ಪ್ರಕರಣ ಗಳಿಗೆ ಸಂಬಂಧಿಸಿದಂತೆ ಮಾತ್ರ ಎಸ್‌ಐಟಿಯು ತನಿಖೆ ನಡೆಸುತ್ತಿದ್ದು ಈ ವೇಳೆ ಇಂತಹ ಕೆಲವು ಸಂಗತಿಗಳು ತನಿಖಾಧಿಕಾರಿಗಳ ಗಮನಕ್ಕೆ ಬಂದಿವೆ ಎನ್ನಲಾಗಿದೆ. ಮತ್ತೂಂದೆಡೆ ಕೆಲವು ಮಹಿಳೆಯರು ತಮ್ಮ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು, ವಿವಿಧ ಆಮಿಷಕ್ಕೊಳಗಾಗಿ ಪ್ರಜ್ವಲ್ ರೇವಣ್ಣ ಜತೆಗೆ ಆತ್ಮೀಯವಾಗಿದ್ದರು. ಪ್ರಜ್ವಲ್ ತಾವು ಕೊಟ್ಟ ಮಾತಿನಂತೆ ಅವರಿಗೆ ಕೆಲವು ಸವಲತ್ತುಗಳನ್ನು ಕಲ್ಪಿಸಿಕೊಟ್ಟಿರುವ ಆರೋಪವೂ ಕೇಳಿ ಬಂದಿದೆ.
ಜೈಲಲ್ಲಿ ಸಹೋದರರು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ ವಿಶೇಷ ಸೌಲಭ್ಯಗಳಿಲ್ಲದೆ ಸಾಮಾನ್ಯ ಕೈದಿಯಂತೆ ಇದ್ದಾರೆ. ಈ ನಡುವೆ ಸೋಮವಾರ ತಾಯಿ ಭವಾನಿ ರೇವಣ್ಣ ಅವರನ್ನು ಭೇಟಿಯಾದ ಬಳಿಕ ಕೊಂಚ ಸಪ್ಪೆಯಾಗಿದ್ದು ಮೌನಕ್ಕೆ ಶರಣಾಗಿದ್ದಾರೆ. ಬುಧವಾರ ಸೂರಜ್ ರೇವಣ್ಣ ಕಸ್ಟಡಿಗೆ ಪಡೆದ ಅವಧಿ ಮುಕ್ತಾಯಗೊಳ್ಳಲಿದ್ದು, ಸಿಐಡಿಯು ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.