ಗೋಲ್ಮಾಲ್ ಸಿಎಂ ಅವರಿಂದ ಮೈಸೂರು ಮೂಡಾದಲ್ಲಿ 4,000 ಕೋಟಿ ರೂ.ಗುಳುಂ- ಆರ್.ಅಶೋಕ್ ವಾಗ್ದಾಳಿ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನ ಗುಳುಂ ಮಾಡಿರುವ ‘ಸಿದ್ಧ’ಹಸ್ತರು ಈಗ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ‘ಕೈ’ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗೋಲ್ಮಾಲ್ ಸಿಎಂ ಸಿದ್ದರಾಮಯ್ಯ ನವರೇ, ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ?
- ಗೋಲ್ಮಾಲ್ ಸಿಎಂ ಸಿದ್ದರಾಮಯಮಯನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ?
- ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?
- 4,000 ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನ ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದೀರಲ್ಲ ಈ ಹಗರಣದಲ್ಲಿ ತಮ್ಮ ಪಾಲೆಷ್ಟು? ಎಂದು ಪ್ರಶ್ನಿಸಿದ್ದಾರೆ.
- 50:50 ಅನುಪಾತ ಹಂಚಿಕೆಗೆ ಅನುಮತಿ ನೀಡಿದ್ದು ಯಾರು?
- ಪರ್ಯಾಯ ನಿವೇಶನ ನೀಡುವಾಗ ಅದೇ ಬಡಾವಣೆ ಬಿಟ್ಟು ಲಾಭದ ಬಡಾವಣೆಗಳಲ್ಲಿ ಅವಕಾಶಕ್ಕೆ ಶಿಫಾರಸ್ಸು ಮಾಡಿದ್ದು ಯಾರು?
- ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಿದ್ದು ಯಾರು?
- ನಿಮ್ಮ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ, ತಮ್ಮ ಕೈವಾಡವಿಲ್ಲದೆ ನಡೆಯಲು ಸಾಧ್ಯವೇ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಅಶೋಕ್ ಹರಿಹಾಯ್ದಿದ್ದಾರೆ.