ಉಡುಪಿ: ಅನುಮತಿ ಇಲ್ಲದೆ ಪಾರ್ಕ್‌ನ ಮರ ಕಡಿದ ಗುತ್ತಿಗೆದಾರನಿಗೆ 25 ಸಾವಿರ ರೂ.ದಂಡ ವಿಧಿಸಿದ ಪೌರಾಯುಕ್ತರು
ಉಡುಪಿ, ಜು.2: ಉಡುಪಿ ನಗರಸಭೆ ಅನುಮತಿ ಇಲ್ಲದೆಯೇ ಅಜ್ಜರಕಾಡಿನ ಭುಜಂಗ ಪಾರ್ಕ್ ನಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಹಾಕಿದ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು 25ಸಾವಿರ ರೂ. ದಂಡ ವಿಧಿಸಿ, ಮರ ಕಡಿದ ಸ್ಥಳದಲ್ಲೇ ಗಿಡಿ ನೆಡುವಂತೆ ಮಾಡಿದ್ದಾರೆ.
ಪಾರ್ಕ್ ನಲ್ಲಿ ಬೆಳೆದು ನಿಂತ ಮರಗಳನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದಕ್ಕೆ ಪಾರ್ಕ್ ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಧರೆಗೆ ಉರುಳಿಸಿದರು. ಮತ್ತೂ ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ ಮರ ಕಡಿಯುವುದನ್ನು ತಡೆದರು.
ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು.
ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಹಾಜರಿದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.