ಹಿಂದೂಗಳಿಗೆ ಅವಮಾನ: ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್‌ಗೆ ಬಿಜೆಪಿ ಮನವಿ

ನವದೆಹಲಿ: ಲೋಕಸಭೆಯಲ್ಲಿ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ ಮೂಲಕ ರಾಹುಲ್ ಗಾಂಧಿ ವಿಪಕ್ಷ ನಾಯಕನ ಸ್ಥಾನಕ್ಕೆ ಕಳಂಕ ತಂದಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕಿರಣ್ ರಿಜಿಜು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹಿಂದೂಗಳನ್ನು ಹಿಂಸೆ ಮತ್ತು ಸುಳ್ಳು ಹೇಳುವುದಕ್ಕೆ ಹೋಲಿಕೆ ಮಾಡಿ, ಹಿಂದೂ ಸಮಾಜಕ್ಕೆ ಅವಮಾನವೆಸಗಿದ್ದಾರೆ ಎಂದು ಇಬ್ಬರೂ ಕೇಂದ್ರ ಸಚಿವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಾಡಿದ ಹಲವು ವಿಷಯಗಳಿಗೆ (ಪ್ರತಿಪಾದನೆಗಳಿಗೆ) ಬಿಜೆಪಿ ಸವಾಲು ಹಾಕಿದ್ದು, ಈ ವಿಷಯವಾಗಿ ಕ್ರಮ ಕೈಗೊಳ್ಳಲು ಸ್ಪೀಕರ್ ಗೆ ಮನವಿ ಮಾಡಿರುವುದಾಗಿ ಹೇಳಿದೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಗಳಲ್ಲಿ ಉಲ್ಲೇಖಿಸಿದ ಪ್ರತಿಪಾದನೆಗಳನ್ನು ರುಜುವಾತು ಮಾಡಬೇಕು ಅಥವಾ ಕ್ಷಮೆ ಕೋರಬೇಕೆಂದು ಅಶ್ವಿನಿ ವೈಷ್ಣವ್ ಹಾಗೂ ಕಿರಣ್ ರಿಜಿಜು ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿನ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವುದು ಹಾಗೂ ಅಗ್ನಿ ಪಥ್ ಯೋಜನೆಯ ವಿಷಯವಾಗಿ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿರುವ ರೈಲ್ವೆ ಸಚಿವ ಕಿರಣ್ ರಿಜಿಜು, ಅಯೋಧ್ಯೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಹಾಗೂ ಇತರರಿಗೆ 1,253 ಕೋಟಿ ರೂಪಾಯಿ ಮೊತ್ತದ ಪರಿಹಾರ ನೀಡಲಾಗಿದೆ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಮಾತನಾಡಿ, ಮಾಜಿ ಗೃಹ ಸಚಿವರಾದ ಪಿ ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆ ಹಿಂದೂ ಧರ್ಮದ ಬಗ್ಗೆ ಭಯೋತ್ಪಾದನೆ ಆರೋಪ ಮಾಡಿದ್ದರು. ಹಿಂದೂಗಳನ್ನು ಅವಮಾನಿಸುವ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ ಎಂದು ತ್ರಿವೇದಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!