ಹಾಸನ: ಎಸ್‌ಪಿ ಕಚೇರಿ ಆವರಣದಲ್ಲಿ ಪತ್ನಿಯನ್ನೇ ಇರಿದು ಹತೈಗೈದ ಕಾನ್‌ಸ್ಟೆಬಲ್‌

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್‌ಸ್ಟೆಬಲ್‌ ಓರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಹಾಸನದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಾಸನ ನಗರ ಠಾಣೆಯ ಕಾನ್‌ಸ್ಟೆಬಲ್‌ ಲೋಕನಾಥ್ ತಮ್ಮ ಪತ್ನಿ ಮಮತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಲೋಕನಾಥ್ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ.

ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್‌ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಮಂದಿ ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಮೃತಪಟ್ಟಿದ್ದಾರೆ.

ಮಮತಾ ಅವರನ್ನು ಚಾಕುವಿನಿಂದ ಇರಿದಿದ್ದನ್ನು ಕಂಡ ಪೊಲೀಸರು, ತಕ್ಷಣವೇ ಹಿಮ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು. ಪತ್ನಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಲೋಕನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪರಸ್ಪರ ಹೊಡೆದಾಡಿಕೊಂಡಿದ್ದ ದಂಪತಿ

ಲೋಕನಾಥ್ ಹಾಗೂ ಮಮತಾ ಇಬ್ಬರಿಗೂ 17 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಕಳೆದ ನಾಲ್ಕೈದ ದಿನದಿಂದಲೂ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ದಂಪತಿಗಳು ಆಗಾಗ್ಗೆ ವಿವಿಧ ವಿಷಯಗಳಿಗೆ ಪರಸ್ಪರ ಜಗಳವಾಡುತ್ತಿದ್ದರು ಮತ್ತು ಸಂಬಂಧಿಕರು ಅವರ ನಡುವೆ ಮಾತುಕತೆ ನಡೆಸಿದರು. ಆದರೆ ಅದು ವಿಫಲವಾಗಿತ್ತು.

ಇಂದು ಕೂಡ ದಂಪತಿಗಳು ಭೂವಿವಾದ ಸಂಬಂಧ ಪರಸ್ಪರ ಜಗಳವಾಡಿದ್ದು ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಹೊಡೆದಿದ್ದಾರೆ. ಹೀಗಾಗಿ ಪತಿ ಲೋಕನಾಥ್ ವಿರುದ್ಧ ಎಸ್ ಪಿಗೆ ದೂರು ನೀಡಲು ಮಮತಾ ಮುಂದಾಗಿದ್ದರು. ಈ ವಿಚಾರ ತಿಳಿದ ಲೋಕನಾಥ್ ಆಕೆಯನ್ನು ಮನೆಯಿಂದ ಮೋಟಾರ್ ಸೈಕಲ್ ನಲ್ಲಿ ಮಮತಾಳನ್ನು ಹಿಂಬಾಲಿಸಿಕೊಂಡು ಬಂದಿದ್ದ.

ಪತ್ನಿ ಎಸ್ ಪಿ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಅಕೆಯನ್ನು ಮನಸೋ ಇಚ್ಛೆ ಇರಿದಿದ್ದಾನೆ. ಈ ವೇಳೆ ಮಮತಾರ ಹೊಟ್ಟೆ ಮತ್ತು ಎದೆಗೆ ಇರಿತವಾಗಿದೆ. ಗಂಭೀರವಾಗಿ ಗಾಯಗೊಂಡ ಮಮತಾ ಅವರನ್ನು ಎಸ್ಪಿ ಕಚೇರಿ ಸಮೀಪವಿರುವ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾರೆ.

ಇರಿತದ ಬಳಿಕ ಲೋಕನಾಥ್ ತನ್ನ ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಮಹಮ್ಮದ್ ಸುಜೀತಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!