ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಅರುಣ್ ಕುಮಾರ್ ಮತ್ತು ಲೋಕು ಪೂಜಾರಿ ಆಯ್ಕೆ
ಉಡುಪಿ: ಯುವವಾಹಿನಿ ಉಡುಪಿ ಘಟಕದ ಪ್ರಾಯೋಜಕತ್ವದಲ್ಲಿ ಕೊಡಲ್ಪಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ಎಸ್.ಆರ್. ಅರುಣ್ ಕುಮಾರ್ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ಬೈದೇರುಗಳ ದರ್ಶನ ಪಾತ್ರಿ ಮೂಜೂರು ಹಾಡಿ ಗರೋಡಿಯ ಲೋಕು ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಮಂಗಳೂರು ವಿವಿಯ ನಾರಾಯಣಗುರು ಪೀಠದ ನಿರ್ದೇಶಕರು ಆಗಿರುವ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಇಬ್ಬರನ್ನು ಪ್ರಶಸ್ತಿಗೆ ನೇಮಕ ಮಾಡಲಾಗಿದೆ. ನ. 8ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರಿನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯುವವಾಹಿನಿ ಉಡುಪಿ ಘಟಕದ ಕಾರ್ಯದರ್ಶಿ ಮಾಲತಿ ಅಮೀನ್ ತಿಳಿಸಿದ್ದಾರೆ.