ಪರ್ಕಳ: ಬೆಕ್ಕನ್ನು ನುಂಗಿ ಬಲೆಯಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವು ರಕ್ಷಣೆ
ಉಡುಪಿ, ಜೂ.29: ಬೆಕ್ಕನ್ನು ನುಂಗಿದ ಹೆಬ್ಬಾವೊಂದು ತಡೆಬೇಲಿಗಾಗಿ ಹಾಕಲಾಗಿದ್ದ ಬಲೆಯಲ್ಲಿ ಸಿಲುಕಿಕೊಂಡ ಘಟನೆ ಹೆರ್ಗ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕೊಂಬೆಯ ಪ್ರಸನ್ನ ಭಂಡಾರಿ ಎಂಬವರ ಮನೆಯ ಅಂಗಳದಲ್ಲಿ ಬೇಟೆಯ ಬರದಲ್ಲಿ ಬೃಹತ್ ಆಕಾರದ ಹೆಬ್ಬಾವು ಮನೆಯ ಬೆಕ್ಕನ್ನು ನುಂಗಿತ್ತೆನ್ನಲಾಗಿದೆ. ಬಳಿಕ ಹಾವು ಮನೆಯ ತಡೆಬೇಲಿಗೆ ಹಾಕಲಾದ ಬಲೆಯಲ್ಲಿ ಸಿಲುಕಿಕೊಂಡಿತು ಎಂದು ತಿಳಿದುಬಂದಿದೆ.
ಕೂಡಲೇ ಮನೆಯವರು ಸ್ಥಳೀಯ ಉರಗ ರಕ್ಷಕ ಪ್ರಾಣೇಶ್ ಪರ್ಕಳ ಅವರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಉಪ ವಲಯ ಅಧಿಕಾರಿ ಸುರೇಶ್ ಗಾಣಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಲೆ ಕತ್ತರಿಸಿ ಹೆಬ್ಬಾವನ್ನು ಬಿಡಿಸಲಾಯಿತು. ಬಳಿಕ ಹೆಬ್ಬಾವು ಇಡೀ ಬೆಕ್ಕಿನ ಶರೀರವನ್ನು ವಾಂತಿ ಮಾಡಿತ್ತು. ನಂತರ ಚಿಕಿತ್ಸೆ ನೀಡಿ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡಲಾಯಿತು.