ಜನಸ್ಪಂದನಾ ಸಭೆಯಲ್ಲಿ ಮಹಿಳಾ ಪಿಡಿಓಗೆ ಗದರಿಸಿದ ಕಾಪು ಶಾಸಕ- ತೀವ್ರ ಖಂಡನೆ
ಉಡುಪಿ ಜೂ.28(ಉಡುಪಿ ಟೈಮ್ಸ್ ವರದಿ): ದಲಿತ ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಸಾರ್ವಜನಿಕ ಸಭೆಯಲ್ಲಿ ಗದರಿಸಿದ ಕಾಪು ಶಾಸಕರ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಇಂದು ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ನಡೆಯುತ್ತಿದ್ದ ಜನಸ್ಪಂದನಾ ಸಾರ್ವಜನಿಕ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪೆರ್ಡೂರು ಗ್ರಾಮ ಪಂಚಾಯತ್‌ನ ದಲಿತ ಮಹಿಳಾ ಅಭಿವೃದ್ಧಿ ಅಧಿಕಾರಿ ಸುಮನಾ ಅವರಿಗೆ ಸಾರ್ವಜನಿಕರ ಎದುರೇ ಗದರಿಸಿದ ಘಟನೆ ನಡೆದಿದೆ.
ಇದೀಗ ಈ ಘಟನೆಗೆ ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾಪು ಬ್ಲಾಕ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಹಾಗೂ ಇತರ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಹಾಗೂ ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿ ಯಾರ ಒತ್ತಡಕ್ಕೂ ಮಣಿಯದೆ ಕಾನೂನಿನ ಪ್ರಕಾರ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ ಅವರ ಮೇಲೆ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರೆದುರೇ ಗದರಿಸಿ ತನ್ನ ದರ್ಪ ತೋರಿದ್ದಾರೆ.
ಒಬ್ಬ ದಲಿತ ಮಹಿಳೆಯಾಗಿ ಹಲವು ಗ್ರಾಮ ಪಂಚಾಯತ್‌ಗಳಲ್ಲಿ ದಕ್ಷ ಹಾಗೂ ನಿಷ್ಟೂರತೆಯಿಂದ ಯಾರ ಒತ್ತಡಕ್ಕೂ ಮಣಿಯದೆ ಜನಸಾಮಾನ್ಯರ ಕೆಲಸಗಳನ್ನು ಮಾಡಿ ಕೊಡುತ್ತಿರುವ ಸುಮನಾ ಅವರು ಪೆರ್ಡೂರು ಗ್ರಾಮ ಪಂಚಾಯತ್ ಕರ್ತವ್ಯಕ್ಕೆ ಹಾಜರಾದ ಮೇಲೆ ಗ್ರಾಮ್ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ದಬ್ಬಾಳಿಕೆಗೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಮಂದಿ ಶಾಸಕರ ನಿಕಟವರ್ತಿಗಳು ಶಾಸಕರಿಗೆ ಸುಳ್ಳು ಅಭಿಪ್ರಾಯ ನೀಡಿದ್ದಾರೆ. ಆದರೆ ಶಾಸಕರು ಈ ಬಗ್ಗೆ ವಿಚಾರ ವಿನಿಮಯ ಮಾಡದೆ ದಲಿತ ಮಹಿಳಾ ಅಧಿಕಾರಿಯ ಮೇಲೆ ದರ್ಪ ತೋರಿ ಅವರ ಶಾಸಕತ್ವದ ಅಧಿಕಾರ ದುರುಪಯೋಗ ಮಾಡಿದ್ದಾರೆ. ಶಾಸಕರಿಗೆ ದಲಿತ ಮಹಿಳಾ ಅಧಿಕಾರಿಯನ್ನು ಸಾರ್ವಜನಿಕರ ಎದುರೇ ನಿಂದಿಸುವ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಹಾಗೂ ಈ ವಿಚಾರವಾಗಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಅವರಿಗೆ ದೂರು ಕೊಟ್ಟು ಕ್ರಮ ಕೈಗೊಳ್ಳಬಹುದಾಗಿತ್ತು ಆದರೆ ಸಾರ್ವಜನಿಕರ ಎದುರೇ ಅಧಿಕಾರಿಗೆ ಗದರಿಸಿ ಅಷ್ಟು ಸಣ್ಣ ಮಟ್ಟಕ್ಕೆ ಇಳಿಯುವ ಶಾಸಕರ ವರ್ತನೆ ಇಡೀ ದಲಿತ ಸಮಾಜ ಮತ್ತು ಉನ್ನತ ಹುದ್ದೆಯ ಅಧಿಕಾರದಲ್ಲಿದ್ದ ಮಹಿಳೆಗೆ ಮಾಡಿದ ಅವಮಾನ ಎಂದು ಖಂಡಿಸಿದ್ದಾರೆ.