ಝೀರೋ ಎಫ್ಐಆರ್, ಆನ್ಲೈನ್ ದೂರು: ನೂತನ ಕ್ರಿಮಿನಲ್ ಕಾನೂನುಗಳು ಜು.1ರಂದು ಜಾರಿಗೆ ಸಿದ್ಧ
ಹೊಸದಿಲ್ಲಿ : ಶೂನ್ಯ ಪ್ರಥಮ ಮಾಹಿತಿ ವರದಿ (ಝೀರೋ ಎಫ್ಐಆರ್), ಆನ್ಲೈನ್ನಲ್ಲಿ ಪೊಲೀಸ್ ದೂರುಗಳ ದಾಖಲಾತಿ, ಇಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಮನ್ಸ್ ನೀಡಿಕೆ, ಎಲ್ಲಾ ರೀತಿಯ ಘೋರ ಅಪರಾಧಗಳು ನಡೆದ ಸ್ಥಳಗಳ ಕಡ್ಡಾಯ ವೀಡಿಯೊ ಚಿತ್ರೀಕರಣ ಇವು ಜುಲೈ 1ರಿಂದ ಜಾರಿಗೆ ಬರಲಿರುವ ನೂತನ ಕ್ರಿಮಿನಲ್ ಕಾನೂನುಗಳ ಪ್ರಮುಖ ಮುಖ್ಯಾಂಶಗಳಾಗಿವೆ.
ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಇವು ಭಾರತೀಯ ಪೌರರ ಸಬಲೀಕರಣಗೊಳಿಸುವ ಹಾಗೂ ಪ್ರತಿಯೊಬ್ಬರಿಗೂ ಹೆಚ್ಚು ಸುಲಭವಾಗಿ ತಲುಪಬಲ್ಲ, ಬೆಂಬಲಾತ್ಮಕ ಮತ್ತು ದಕ್ಷತೆಯುಳ್ಳ ನ್ಯಾಯಾಂಗ ವ್ಯವಸ್ಥೆಯಾಗಿದೆ ಎಂದು ಅಧಿಕೃತ ಮೂಲಗಳು ತಿಸಿವೆ. ನೂತನ ಕ್ರಿಮಿನಲ್ ಕಾನೂನುಗಳು ತ್ವರಿತ ಹಾಗೂ ನ್ಯಾಯಯುತ ಪರಿಹಾರದ ಭರವಸೆ ನೀಡುತ್ತದೆ.
ನೂತನ ಕ್ರಿಮಿನಲ್ ಕಾನೂನುಗಳನ್ನ 2023ರಲ್ಲಿ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.
ನೂತನ ಕ್ರಿಮಿನಲ್ ಕಾನೂನುಗಳಲ್ಲಿ ಏನೇನಿವೆ?
1.ನೂತನ ಕಾನೂನುಗಳಡಿ ಒಬ್ಬ ವ್ಯಕ್ತಿಯು ಪೊಲೀಸ್ ಠಾಣೆಗೆ ಭೇಟಿ ನೀಡದೆಯೇ, ಇಲೆಕ್ಟಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದಾಗಿದೆ. ಇದು ತ್ವರಿತ ಹಾಗೂ ಸುಲಭವಾಗಿ ಪ್ರಕರಣದ ವರದಿಗಾರಿಕೆಗೆ ಆಸ್ಪದ ಮಾಡಿಕೊಡುತ್ತದೆ ಹಾಗೂ ಪೊಲೀಸರಿಂದ ಕ್ಷಿಪ್ರ ಕ್ರಮಕ್ಕೆ ಅವಕಾಶ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.
2.ಝೀರೋ ಎಫ್ಐಆರ್ ಮೂಲಕ ಓರ್ವ ವ್ಯಕ್ತಿಯು ಯಾವುದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದಾಗಿದೆ. ಅಪರಾಧ ಘಟನೆ ನಡೆದ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ಮಾತ್ರವೇ ಎಫ್ಐಆರ್ ದಾಖಲಿಸಬೇಕೆಂಬುದಿಲ್ಲ. ಕಾನೂನು ಕಲಾಪಗಳ ಉಪಕ್ರಮಗಳನ್ನು ಕೈಗೊಳ್ಳುವಲ್ಲಿನ ವಿಳಂಬವನ್ನು ಈ ನಿಯಮವು ನಿವಾರಿಸಿದೆ ಹಾಗೂ ಅಪರಾಧವನ್ನು ತಕ್ಷಣವೇ ವರದಿ ಮಾಡಲು ಇದು ನೆರವಾಗಲಿದೆ.
3. ಬಂಧನವಾದ ವ್ಯಕ್ತಿಯು ತನ್ನ ಪರಿಸ್ಥಿತಿ ಬಗ್ಗೆ ತನ್ನ ಆಯ್ಕೆಯ ವ್ಯಕ್ತಿಗೆ ಮಾಹಿತಿ ನೀಡುವ ಹಕ್ಕನ್ನು ಹೊಂದಿರುತ್ತಾನೆ. ಬಂಧಿತ ವ್ಯಕ್ತಿಗೆ ತಕ್ಷಣವೇ ಬೆಂಬಲ ಹಾಗೂ ನೆರವು ದೊರೆಯುವುದು ಇದರಿಂದ ಸಾಧ್ಯವಾಗಲಿದೆ.
4. ಬಂಧನದ ವಿವರಗಳನ್ನು ಪೊಲೀಸ್ ಠಾಣೆಯೊಳಗೆ ಹಾಗೂ ಜಿಲ್ಲಾ ಪೊಲೀಸ್ ಮುಖ್ಯ ಕಾರ್ಯಾಲಯದೊಳಗೆ ಪ್ರದರ್ಶಿಸಲಾಗುವುದು. ಬಂಧಿತ ವ್ಯಕ್ತಿಯ ಕುಟುಂಬಗಳು ಹಾಗೂ ಸ್ನೇಹಿತರಿಗೆ ಮಹತ್ವದ ಮಾಹಿತಿ ಇದರಿಂದ ಲಭ್ಯವಾಗಲಿದೆ.
5. ಗಂಭೀರ ಅಪರಾಧಗಳು ಹಾಗೂ ಪುರಾವೆಗಳನ್ನು ಸಂಗ್ರಹಿಸಲು ಅಪರಾಧ ಸ್ಥಳಗಳಿಗೆ ಫಾರೆನ್ಸಿಕ್ ತಜ್ಞರು ಭೇಟಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
6. ಅಪರಾಧ ನಡೆದ ಸ್ಥಳಗಳಲ್ಲಿ ಪುರಾವೆಗಳನ್ನು ಸಂಗ್ರಹಿಸುವಾಗ ವೀಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸುವುದರಿಂದ ಪುರಾವೆಗಳ ತಿರುಚುವಿಕೆಯನ್ನು ತಡೆಗಟ್ಟಬಹುದಾಗಿದೆ.
7. ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ತನಿಖೆಗೆ ಆದ್ಯತೆ ನೀಡಿ ಎರಡು ತಿಂಗಳುಗಳೊಳಗೆ ಮಾಹಿತಿಯನ್ನು ದಾಖಲಿಸಿ ಕೊಳ್ಳುವ ಮೂಲಕ ಸಕಾಲಿಕವಾಗಿ ಪೂರ್ಣಗೊಳಿಸ ಬೇಕು.
8. ನೂತನ ಕಾನೂನಿನಡಿ ಪ್ರಕರಣಗಳ ತನಿಖೆಯ ಪ್ರಗತಿ ಬಗ್ಗೆ ಸಂತ್ರಸ್ತರಿಗೆ 90 ದಿನಗಳೊಳಗೆ ಮಾಹಿತಿ ನೀಡಬೇಕಾಗುತ್ತದೆ..
9. ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸಾ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಒದಗಿಸ ಬೇಕಾಗುತ್ತದೆ.
10. ಇಲೆಕ್ಟ್ರಾನಿಕ್ ಸಂವಹನಗಳ ಮೂಲಕ ಸಮನ್ಸ್ ಗಳನ್ನು ನೀಡಬಹುದಾಗಿದೆ. ಆ ಮೂಲಕ ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದಾಗಿದೆ.
11. ಆರೋಪಿ ಹಾಗೂ ಸಂತ್ರಸ್ತರು ಎಫ್ಐಆರ್, ಪೊಲೀಸ್ ವರದಿ, ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆ ಹಾಗೂ ಇತರ ದಾಖಲೆಗಳನ್ನು 14 ದಿನಗಳೊಳಗೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
12. ಪ್ರಕರಣಗಳ ಆಲಿಕೆಯಲ್ಲಿ ಅನಗತ್ಯ ವಿಳಂಬಗಳನ್ನು ತಪ್ಪಿಸಲು ಗರಿಷ್ಠ ಎರಡು ಸಲ ಪ್ರಕರಣದ ಆಲಿಕೆಗಳನ್ನು ಮಂದೂಡಬಹುದಾಗಿದೆ. ಆ ಮೂಲಕ ಸಕಾಲಿಕವಾಗಿ ನ್ಯಾಯದಾನವನ್ನು ಖಾತರಿಪಡಿಸಲಾಗುತ್ತದೆ.
13.ಸಾಕ್ಷಿದಾರರ ಸುರಕ್ಷತೆ ಹಾಗೂ ಸಹಕಾರವನ್ನು ಖಾತರಿಪಡಿಸಲು ಎಲ್ಲಾ ರಾಜ್ಯ ಸರಕಾರಗಳು ಸಾಕ್ಷಿ ರಕ್ಷಣಾ ಯೋಜನೆಯನ್ನು ಜಾರಿಗೊಳಿಸುವುದನ್ನು ನೂತನ ಕಾನೂನುಗಳು ಕಡ್ಡಾಯಗೊಳಿಸಿವೆ.
14. ಎಲ್ಲಾ ನಾಗರಿಕರ ಒಳಗೊಳ್ಳುವಿಕೆ ಹಾಗೂ ಸಮಾನತೆಗೆ ಉತ್ತೇಜನ ನೀಡಲು ಲಿಂಗತ್ವ ವ್ಯಾಖ್ಯಾನದಲ್ಲಿ ಲಿಂಗಾಂತರಿಗಳನ್ನು ಕೂಡಾ ಸೇರ್ಪಡೆಗೊಳಿಸಲಾಗುವುದು.