ಹವಮಾನ ಆಧಾರಿತ ಬೆಳೆವಿಮಾ ಯೋಜನೆ ಅನುಷ್ಠಾನಕ್ಕೆ ಸರಕಾರದ ನಿರಾಸಕ್ತಿ- ಭಾ.ಕಿ.ಸಂ ಆಕ್ಷೇಪ

ಉಡುಪಿ: ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಮಳೆಗಾಲದಲ್ಲಿ ಕಾಡುವ ಕೊಳೆರೋಗ ಹಾಗೂ ಸೊರಗು ರೋಗಗಳಿಂದಾಗಿ ಸಾಕಷ್ಟು ನಷ್ಟ ಆಗುತ್ತಿತ್ತು. ಪ್ರತೀ ವರ್ಷ ನಷ್ಟಕ್ಕೆ ಪರಿಹಾರ ಕೊಡುವಂತೆ ಮನವಿ ಸಲ್ಲಿಸಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ರೈತರದ್ದು ಆಗಿತ್ತು. ಆದರೆ ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಈ ಎಲ್ಲಾ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ವ್ಶೆಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಿ ಕೊಡುವಲ್ಲಿ ಸಫಲವಾಗಿದೆ.

ಪ್ರತೀ ವರ್ಷ ಜುಲೈ 1ರಿಂದ ಪ್ರಾರಂಭವಾಗಿ ಮು0ದಿನ ವರ್ಷದ ಜೂನ್ 30ರವರೆಗಿನ ಅವಧಿಯ ವಿಮೆ ಇದಾಗಿದ್ದು ಪ್ರತಿ ವರ್ಷ ಜೂನ್ 15ರಿಂದ ಜುಲೈ1 ರವರೆಗೆ ರೈತರಿಗೆ ವಿಮಾ ಕಂತನ್ನು ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಈ ವಿಮಾ ಯೋಜನೆಯ ಒಟ್ಟು ಪರಿಹಾರ ಮೊತ್ತದಲ್ಲಿ ಕೇವಲ 5%ರಷ್ಟು ಪ್ರೀಮಿಯಂ ಹಣವನ್ನು ರೈತರು ತುಂಬ ಬೇಕಾಗಿತ್ತು. ಉಳಿದಂತೆ ವಿಮಾ ಕಂಪನಿಯು ಬಿಡ್ ಸಲ್ಲಿಸುವ ಪ್ರೀಮಿಯಂ ಹಣದಲ್ಲಿ ಸರಾಸರಿ ಸುಮಾರು 30% ರಲ್ಲಿ 25%ವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಂಚಿ ತುಂಬಿಕೊಡುತ್ತಿದ್ದವು. ಆದರೆ ಈ ಪ್ರಮಾಣವನ್ನು ತುಂಬಿಕೊಡುವುದಕ್ಕೆ ನಿರಾಸಕ್ತಿ ತೋರುತ್ತಿರುವ ರಾಜ್ಯ ಸರಕಾರ ಹಾಗೂ ಅಧಿಕಾರಿಗಳು ಕಳೆದ ವರ್ಷ ಪ್ರೀಮಿಯಂ ಹಣವನ್ನು ತುಂಬುವ ಅವಧಿಯನ್ನು 15 ದಿನಗಳ ಬದಲಿಗೆ 1ವಾರಕ್ಕೆ ಇಳಿಸಿತ್ತು.

ಹಾಗೆಯೇ ಈ ವರ್ಷ ಕೂಡ ಕೇವಲ 4 ದಿನಗಳಲ್ಲಿ ರೈತರಿಗೆ ಪ್ರೀಮಿಯಂ ಹಣವನ್ನು ತುಂಬುವ ಅವಕಾಶ ಕಲ್ಪಿಸಿ ಈ ಅತ್ಯಅಲ್ಪ ಸಮಯದಲ್ಲಿ ಅವರಿಗೆ ಸಾಧ್ಯವಾಗದೇ ಹಿಂಜರಿಯುವ0ತೆ ಮಾಡಿ ರೈತರಿಗೆ ಅನುಕೂಲಕರ ವಾಗಿದ್ದ ಈ ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸುವ ಚಿಂತನೆಯಲ್ಲಿಇದ್ದ0ತೆ ಕಂಡುಬರುತ್ತಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘವು ಅಕ್ರೋಶ ವ್ಯಕ್ತಪಡಿಸಿದ್ದು ವಿಮಾ ಕಂತನ್ನು ತುಂಬುವ ಕನಿಷ್ಠ ಅವಧಿಯನ್ನು ಇನ್ನೂ 15 ದಿನಗಳಿಗೆ ವಿಸ್ತರಿಸುವಂತೆ ಕೋರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನಪ್ರತನಿಧಿಗಳೂ ಕೂಡ ಎಚ್ಚೆತ್ತು ರೈತಸ್ನೇಹಿಯಾದ ಇಂತಹ ಬೆಳೆ ವಿಮಾ ಯೋಜನೆಯನ್ನು ರೈತರಿಗೆ ಉಳಿಸಿಕೊಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ಸಂಘ ಅಭಿಪ್ರಾಯ ಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!