ರೇಣುಕಾಸ್ವಾಮಿ ಪ್ರಕರಣ: ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡಗೆ ಮೇಕ್ ಅಪ್‌ಗೆ ಅನುಮತಿ- ಎಸ್‌ಐಗೆ ಪೊಲೀಸ್ ನೊಟೀಸ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಪವಿತ್ರಾ ಗೌಡಾಗೆ ಪೊಲೀಸ್ ಕಸ್ಟಡಿ ವೇಳೆ ಮೇಕ್ ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ ಮಹಿಳಾ ಸಬ್-ಇನ್ಸ್ ಪೆಕ್ಟರ್ ಗೆ ಪೊಲೀಸ್ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಜೂ.15 ರಂದು ಪವಿತ್ರಾ ಗೌಡ ಅವರನ್ನು ಸ್ಥಳ ಮಹಜರು ನಡೆಸಲು ಪೊಲೀಸ್ ಅಧಿಕಾರಿಗಳು ಆಕೆಯ ಮನೆಗೆ ಕರೆದೊಯ್ದಿದ್ದರು.
ಮನೆಗೆ ಕರೆದೊಯ್ದ ವೇಳೆ ಪವಿತ್ರಾ ಗೌಡ ಮನೆಯಿಂದ ವಾಪಸ್ಸಾಗಬೇಕಾದರೆ ಲಿಪ್ ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ನಗುತ್ತಾ ಹೊರಬರುತ್ತಿದ್ದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ದರ್ಶನ್ ಅವರ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಯಾವುದೇ ತಪ್ಪಿತಸ್ಥ ಭಾವನೆ ತೋರಿಸದಿದ್ದದ್ದು ಚರ್ಚೆಗೆ ಕಾರಣವಾಗಿತ್ತು. ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅನುಮತಿ ನೀಡಿದ್ದರ ಕುರಿತು ಡಿಸಿಪಿ (ಪಶ್ಚಿಮ) ಕಚೇರಿಯಿಂದ ಎಸ್‌ಐಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸ್ಪಷ್ಟನೆ ಕೇಳಲಾಗಿದೆ.
ಈ ಮಧ್ಯೆ, ಪವಿತ್ರಾ ಗೌಡ ಅವರ ತಾಯಿ ಮತ್ತು ಮಗಳು ಅವರನ್ನು ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು ಮತ್ತು ಭೇಟಿಯ ಸಮಯದಲ್ಲಿ ಅವರು ಕಣ್ಣೀರು ಹಾಕಿದರು ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ದರ್ಶನ್ ಬಳಿಯಿದ್ದ ಎರಡು ಯುಎಸ್ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಸಹಚರ ಪ್ರದೋಶ್ ಬಳಿ ಒಂದು ಪಿಸ್ತೂಲ್ ಇದೆ. ಇಬ್ಬರಿಗೂ ಲೈಸೆನ್ಸ್ ಇದ್ದು, ಲೋಕಸಭೆ ಚುನಾವಣೆ ವೇಳೆ ತಮ್ಮ ಬಳಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಅಧಿಕೃತವಾಗಿ ವಿನಾಯಿತಿ ನೀಡಲಾಗಿತ್ತು. ಆರೋಪಿಗಳ ಮನೆಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಂತೆ ಆರ್‌ಆರ್ ನಗರ ಮತ್ತು ಗಿರಿನಗರ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.