ಅತ್ಯುತ್ತಮ ಆಡಳಿತ ರಾಜ್ಯಗಳ ಪಟ್ಟಿ: ಕೇರಳಕ್ಕೆ ಅಗ್ರ ಸ್ಥಾನ, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ!

ನವದೆಹಲಿ: ದೇಶದಲ್ಲಿ ಅತ್ಯುತ್ತಮ ಆಡಳಿತವಿರುವ ರಾಜ್ಯಗಳ ಪಟ್ಟಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರ ಕೇರಳ ಆಗ್ರಸ್ಥಾನದಲ್ಲಿದ್ದು, ಯೋಗಿ ಆದಿತ್ಯಾನಾಥ್ ಆಡಳಿತ ವಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಪಬ್ಲಿಕ್ ಅಫೇರ್ಸ್ ಸೆಂಟರ್ ಎಂಬ ಸಂಸ್ಥೆ ಬಿಡುಗಡೆಗೊಳಿಸಿದ ‘ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020’ ಇದರಲ್ಲಿ ಕೇರಳ ದೇಶದ ಅತ್ಯುತ್ತಮ ಆಡಳಿತವಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ ಉತ್ತರ ಪ್ರದೇಶ ಈ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ  ಮೊದಲ ಸ್ಥಾನ ಪಡೆದಿದೆ. ಸುಸ್ಥಿರ ಅಭಿವೃದ್ಧಿ ಮಾನದಂಡದ ಆಧಾರದಲ್ಲಿ ಈ ಸೂಚ್ಯಂಕದಲ್ಲಿ ರ್ಯಾಂಕಿಂಗ್ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ರೋದ ಮಾಜಿ ಮುಖ್ಯಸ್ಥ ಕೆ ಕಸ್ತೂರಿರಂಗನ್ ಹೇಳಿದ್ದಾರೆ.

ಪಬ್ಲಿಕ್ ಅಫೇರ್ಸ್ ಸೆಂಟರ್ ಸಂಸ್ಥೆ ಈ ಪಟ್ಟಿ ಸಿದ್ಧ ಪಡಿಸಿದ್ದು, ಎರಡು ಕೋಟಿಗಿಂತ ಅಧಿಕ ಜನಸಂಖ್ಯೆಯಿರುವ 18 ರಾಜ್ಯಗಳ ಪೈಕಿ ಕೇರಳ (1.388 ಅಂಕ), ತಮಿಳುನಾಡು (0.912 ಅಂಕ), ಆಂಧ್ರ ಪ್ರದೇಶ (0.531 ಅಂಕ) ಹಾಗೂ ಕರ್ನಾಟಕ (0.468 ಅಂಕ) ಮೊದಲ ನಾಲ್ಕು ಸ್ಥಾನಗಳನ್ನು ಪಡೆದಿವೆ. ಆದರೆ ಉತ್ತರ  ಪ್ರದೇಶ ( -1.461), ಒಡಿಶಾ (-1.201) ಹಾಗೂ ಬಿಹಾರ (-1.158) ರಾಜ್ಯಗಳು ನಕಾರಾತ್ಮಕ ಅಂಕಗಳೊಂದಿಗೆ ಕೊನೆಯ ಸ್ಥಾನ ಪಡೆದಿವೆ. 

ಇನ್ನು ಎರಡು ಕೋಟಿಗೂ ಕಡಿಮೆ ಜನಸಂಖ್ಯೆಯ ರಾಜ್ಯಗಳ ಪೈಕಿ ಗೋವಾ (1.745) ಪ್ರಥಮ ಸ್ಥಾನ ಪಡೆದರೆ ಮೇಘಾಲಯ (0.797) ಹಾಗೂ ಹಿಮಾಚಲ ಪ್ರದೇಶ (0.725) ನಂತರದ ಸ್ಥಾನಗಳನ್ನು ಪಡೆದಿವೆ. ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ಕೊನೆಯ ಸ್ಥಾನಗಳನ್ನು ಗಳಿಸಿದ  ಸಣ್ಣ ರಾಜ್ಯಗಳಾಗಿವೆ.

ಉತ್ತಮ ಆಡಳಿತ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಘಡ (1.05) ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಪುದುಚೇರಿ (0.52), ಲಕ್ಷದ್ವೀಪ (0.003), ದಾದರ್ ಮತ್ತು ನಗರ ಹವೇಲಿ (-0.69), ಜಮ್ಮು ಮತ್ತು ಕಾಶ್ಮೀರ ತಲಾ (-0.50) ಅಂಡಮಾನ್ ಮತ್ತು ನಿಕೋಬಾರ್ (-0.30) ಇವೆ.

Leave a Reply

Your email address will not be published. Required fields are marked *

error: Content is protected !!