ಜ್ಞಾನಭಾರತ್- ಬಾಲಸಂಸ್ಕಾರ: ಪೋಷಕರ ಸಭೆ
ಕಾರ್ಕಳ: ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಪಠ್ಯಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸದಲ್ಲಿ ನಮ್ಮ ಪೋಷಕರು ತೊಡಗಬೇಕು ಎಂದು ಜ್ಞಾನ ಭಾರತ್ ಅಧ್ಯಕ್ಷರಾದ ದಿನೇಶ್.ಎಂ.ಕೊಡವೂರ್ ಹೇಳಿದರು.
ಅವರು ಗಣಿತ ನಗರದ ಜ್ಞಾನಸುಧಾ ಆವರಣದಲ್ಲಿ ಆಯೋಜಿಸಿದ್ದ ಜ್ಞಾನ ಭಾರತ್- ಬಾಲಸಂಸ್ಕಾರದ ಪೋಷಕರ ಸಭೆ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
ಪಠ್ಯಶಿಕ್ಷಣ ಅವರ ಮುಂದಿನ ಜೀವನದಲ್ಲಿ ಉದ್ಯೋಗಕಷ್ಟೆ ಸೀಮಿತವಾದರೆ, ಧಾರ್ಮಿಕ ಶಿಕ್ಷಣ ಅವರ ಸಂಸ್ಕಾರಯುತ ಬದುಕಿಗೆ ಪೂರಕವಾಗಿ ಜೀವನದ ಕಷ್ಟ ನಷ್ಟಗಳನ್ನು ಎದುರಿಸುವ ಶಕ್ತಿ ನೀಡಬಲ್ಲದಾಗಿದೆ. ಇಂದಿನ ಜನಾಂಗಕ್ಕೆ ನಮ್ಮ ಧರ್ಮದ ಆಚಾರ, ವಿಚಾರಗಳನ್ನು ತಿಳಿಸಿ, ನಿತ್ಯಜೀವನದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ನಡೆಯಬೇಕಿದೆ. ಈ ದೆಸೆಯಲ್ಲಿ ಜ್ಞಾನಭಾರತ್ ವೃಂದ – ‘ಬಾಲ ಸಂಸ್ಕಾರ’ವು ಕಾರ್ಯ ಪ್ರವೃತ್ತವಾಗಿದೆ ಎಂದರು.
ಇದೇ ಸಂದರ್ಭ ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಪೂರ್ಣಿಮ ಪೈ, ಸಂಚಾಲಕರಾದ ಸುಮಿತ್ ಇ, ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ಉಷಾ ರಾವ್ ಯು, ವಾಣಿ ಕೆ, ಶೈಲೇಶ್ ಶೆಟ್ಟಿ, ರಾಜ್ ಕಿರಣ್, ಗಾಯತ್ರಿ, ಚೇತನಾ, ಸಂತೋಷ್, ಲಕ್ಷ್ಮೀ, ಅಕ್ಷತಾ ಉಪಸ್ಥಿತರಿದ್ದರು.
ಬಾಲಸಂಸ್ಕಾರ:- ಜ್ಞಾನ ಭಾರತ್ ಸಮಿತಿ, ಗಣಿತ ನಗರ, ಕಾರ್ಕಳ ಇವರ ಆಶ್ರಯದಲ್ಲಿ 9ರಿಂದ 14ರ ಹರೆಯದ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ‘ಬಾಲ ಸಂಸ್ಕಾರ’ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 3.30.ರಿಂದ 5.30ರವರೆಗೆ ಗಣಿತನಗರದ ಶ್ರೀ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಕಳೆದ 7 ತಿಂಗಳಿಂದ ನಡೆಯುತ್ತಿದೆ. ಮಕ್ಕಳಿಗೆ ಸನಾತನ ಸಂಸ್ಕೃತಿ ಹಾಗೂ ದೇಶಭಕ್ತಿಯ ಅರಿವನ್ನು, ಭಗವದ್ಗೀತೆ, ರಾಮಾಯಣ, ಮಹಾಭಾರತದ ಜ್ಞಾನದ ಮುಖಾಂತರ ನೀಡಿ, ಬದುಕು ಕಟ್ಟಿಕೊಡುವ ಸ್ಫೂರ್ತಿಚೇತನರ ಯಶೋಗಾಥೆಗಳನ್ನು ತಿಳಿಸಿ, ನವಭಾರತದ ಸದೃಢ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಚಿಂತನೆ ಹೊಂದಲಾಗಿದೆ. ಈ ಕಾರ್ಯಕ್ರಮವನ್ನು ಕಾರ್ಕಳ ಪರಿಸರದ ಮಕ್ಕಳಿಗೆ ಆಯೋಜಿಸಿದ್ದು, ಆಸಕ್ತ ಪೋಷಕರು ಆಯೋಜಕರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.