ಉಡುಪಿ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಫೋಸ್ಟರ್ ಅಂಟಿಸುವ ಪ್ರತಿಭಟನೆ ಹಮ್ಮಿಕೊಂಡ ಬಿಜೆಪಿ

ಉಡುಪಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂಬ ಕಾಂಗ್ರೆಸ್ ಆರೋಪವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಫೋಸ್ಟರ್ ಅಂಟಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

‘ತುರ್ತುಪರಿಸ್ಥಿತಿ ಹೇರಿದ ಇಂದಿರಾ ಸ್ವಾರ್ಥಕ್ಕಾಗಿ ಸಂವಿಧಾನ ದುರ್ಬಳಕೆ.! ಖರ್ಗೆ ಕ್ಷಮೆ ಕೇಳಲಿ’, ‘ಅವತ್ತು ತುರ್ತುಪರಿಸ್ಥಿತಿ ವಿರೋಧಿಸಿದ್ದ ಸಿದ್ದರಾಮಯ್ಯ ಇವತ್ತು ಮೌನ’, ‘ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಎಲ್ಲಿದೆ’ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿದ ದ್ರೋಹಕ್ಕೆ ರಾಹುಲ್ ಗಾಂಧಿ‌ ಕ್ಷಮೆ ಕೇಳಲಿ’ ಈ ಮೊದಲಾದ ಬರಹವುಳ್ಳ ಪೋಸ್ಟರ್ ಅನ್ನು ಬಿಜೆಪಿ ಮುಖಂಡರು ಹಿಡಿದುಕೊಂಡು ಕಾಂಗ್ರೆಸ್ ಕಚೇರಿಗೆ ತೆರಳಲು ಮುಂದಾದರು. ಬಿಜೆಪಿ ಕಚೇರಿಯಿಂದ ತೆರಳಿದ ಬಿಜೆಪಿ ಮುಖಂಡರನ್ನು ಪೊಲೀಸರು ಮಾರ್ಗ ಮಧ್ಯೆ ತಡೆದರು. ಪೊಲೀಸರ ಮನವಿಗೆ ಸ್ಪಂದಿಸಿದ ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, ಕಾಂಗ್ರೆಸ್ ನವರು ಸಂವಿಧಾನ ವಿರೋಧಿ ಎಂದು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರು ಸಂವಿಧಾನ ವಿರೋಧಿಗಳೆಂದು ಜನರಿಗೆ ಗೊತ್ತಾಗ ಬೇಕು. ತುರ್ತು ಪರಿಸ್ಥಿತಿಯನ್ನು ಹೇರಿದವರು ಯಾರು?, ತುರ್ತು ಪರಿಸ್ಥಿತಿಯಿಂದ ಎಷ್ಟು ಜನರಿಗೆ ತೊಂದರೆ ಆಗಿದೆ.?, ಎಷ್ಟು ಜನರ ಹಕ್ಕನ್ನು ಅವರು ಕಸಿದುಕೊಂಡಿದ್ದಾರೆ ಎನ್ನುವಂತಹ ಸತ್ಯ ಜನರಿಗೆ ಗೊತ್ತಾಗಬೇಕು. ಈ ಕಾರಣಕ್ಕಾಗಿ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸುವ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾಉದಯ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಮಾಧ್ಯಮ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್, ಮುಖಂಡರಾದ ಶಾಮಲ ಕುಂದರ್, ಗಿರೀಶ್ ಅಂಚನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!