ಉಡುಪಿ: ನೂತನ ವಾಹಿನಿ ”ಪಬ್ಲಿಕ್ ಲೈನ್” ಲೋಕಾರ್ಪಣೆ
ಉಡುಪಿ ಜೂ.24 (ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ಭರವಸೆಯ ನೂತನ ವಾಹಿನಿ “ಪಬ್ಲಿಕ್ ಲೈನ್” ಲೋಕಾರ್ಪಣೆಗೊಂಡಿದೆ.
ನೂತನ ವಾಹಿನಿಯನ್ನು ನಗರಸಭಾ ಪೌರಾಯುಕ್ತರಾದ ರಾಯಪ್ಪ ಅವರು ಭಾನುವಾರ ಮಥುರಾ ಹೋಟೆಲ್ ನ ಜಯಕೃಷ್ಣ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪತ್ರಿಕೆಗಳು ಮತ್ತು ಮಾಧ್ಯಮಗಳು ಜನರ ಸಮಸ್ಯೆ ಬಗ್ಗೆ ಜನರಿಗೆ ತಲುಪುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತದೆ. “ಪಬ್ಲಿಕ್ ಲೈನ್” ವಾಹಿನಿ ಮುಂದಿನ ದಿನಗಳಲ್ಲಿ ಜನಸ್ನೇಹಿ ವಾಹಿನಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.
ನೂತನ ವಾಹಿನಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಉದ್ಯಮಿ ವಿಶ್ವನಾಥ ಶೆಣೈ ಅವರು ಮಾತನಾಡಿ, ನೂತನ ವಾಹಿನಿಯ ಯಶಸ್ವಿಗೆ ಬೇಕಾದ ಸಹಕಾರ ಸದಾ ನೀಡುತ್ತೇವೆ. ಸಂಸ್ಥೆ ಉಜ್ವಲವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ಯ ಅವರು ಮಾತನಾಡಿ, ಛಲವಿದ್ದರೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿ ಸಂಸ್ಥೆಯ ಯಶಸ್ವಿಗೆ ಶುಭ ಹಾರೈಸಿದರು. ನಗರಸಭಾ ಸದಸ್ಯ ವಿಜಯ ಕೊಡವೂರು ಅವರು ಮತನಾಡಿ, ಪಬ್ಲಿಕ್ ಲೈನ್ ಸಮಾಜವನ್ನು ಜಾಗೃತಿ ಮಾಡಲು ಹುಟ್ಟಿರುವಂತಹ ವಾಹಿನಿ. ನಮ್ಮ ಕಾರ್ಯಾಂಗ, ನ್ಯಾಯಾಂಗದಲ್ಲಿ ಆಗಿರುವ ಲೋಪಗಳನ್ನು ಮಾಧ್ಯಮದವರು ಎತ್ತಿ ತೋರಿಸಿದಾಗ ಅದು ಸರಿಯಾಗುತ್ತದೆ. ವೃತ್ತಿ ಜೀವನದ ಧರ್ಮವನ್ನು ಪ್ರತಿಯೊಬ್ಬರು ನಿರ್ವಹಿಸಿ ಕೇವಲ ಹಣಕ್ಕಾಗಿ ಅಲ್ಲದೆ ಸಮಾಜವನ್ನು ಉಳಿಸಿಕೊಳ್ಳಬೇಕು, ದೇಶವನ್ನು ಉಳಿಸಿಕೊಳ್ಳಬೇಕು, ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನೀಡಬೇಕು ಎಂಬ ಯೋಜನೆ ಮಾಡಿದಾಗ ಸಮಾಜ ಸರಿಯಾಗುತ್ತದೆ. ಅದು ಆಗಬೇಕಾದರೆ ನಾವು ಸಮಜಕ್ಕೆ ಪೂರಕವಾಗಿ ಬದುಕಲು ಸಾಧ್ಯವಿದೆಯೇ ಎಂಬ ಸಂಕಲ್ಪ ಮಾಡಬೇಕು. ಆ ನಿಟ್ಟಿನಲ್ಲಿ ಪಬ್ಲಿಕ್ ಲೈನ್ ವಾಹಿನಿ ಎಲ್ಲರ ತಪ್ಪುಗಳನ್ನು ತೋರಿಸುವ ಜೊತೆಗೆ ಸಮಾಜದ ಉತ್ತಮ ಕೆಲಸಗಳನ್ನೂ ತೋರಿಸುವಂತಾಗಬೇಕು. ಇದರಿಂದ ಸಮಾಜ ಜಾಗೃತಿಯಾಗಲಿ ಎಂದು ಹೇಳಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪಬ್ಲಿಕ್ ಲೈನ್ ವಾಹಿನಿಯ ಪ್ರವರ್ತಕರಾದ ಉಮೇಶ್ ಮಾರ್ಪಳ್ಳಿ, ಅಕ್ಷತಾ ಗಿರೀಶ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಡಗಬೆಟ್ಟು ಕ್ರೆಡಿಟ್ ಕೋ.ಅ. ಸೊಸೈಟಿಯ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಇಂದಿನ ಕಾಲದಲ್ಲಿ ಆರೋಗ್ಯವೇ ಬಹುದೊಡ್ಡ ಸಂಪತ್ತು. ನಾವು ಹಿತಮಿತ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಅಡುಗೆ ಕೊಣೆಯಲ್ಲಿ ಬೆಂಕಿ ಇಲ್ಲದೆ ಆಹಾರ ತಯಾರಿಸಿ ಉತ್ತಮ ಆರೋಗ್ಯವಂತರಾಗಿ ಇರುವಂತೆ ಜಾಗೃತಿ ಮೂಡಿಸುವ ಕೆಲಸ ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೆ.ಕೃಷ್ಣಪ್ರಸಾದ್, ನಗರಸಭಾ ಸದಸ್ಯರಾ ವಿಜಯ್ ಕೊಡವೂರು, ಅಮೃತ ಕೃಷ್ಣಮೂರ್ತಿ ಆಚಾರ್ಯ, ಸಮಾಜಸೇವಕಾರದ ಕೃಷ್ಣಮೂರ್ತಿ ಆಚಾರ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಲೆವೂರು ರಾಜೇಶ ಶೆಟ್ಟಿ, ಉಮೇಶ್ ಮಾರ್ಪಳ್ಳಿ, ಅಕ್ಷತಾ ಗಿರೀಶ್ ಐತಾಳ್ ಉಪಸ್ಥಿತರಿದ್ದರು.
ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ಸೀಮಾ ಪೈ ದ್ವಿತೀಯ ಬಹುಮಾನ ಪ್ರಿಯಾ ನಾಯಕ್, ತೃತೀಯ ಬಹುಮಾನವನ್ನು ವೀರಭದ್ರ ಪಡೆದರು.
ಇನ್ನು ಮಕ್ಕಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ ಬಣ್ಣದಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅನ್ವಿತಾ ಶೆಟ್ಟಿಗಾರ್, ದ್ವಿತೀಯ ಬಹುಮಾನ ವಿನೇಶ್ ಆಚಾರ್ಯ, ತೃತೀಯ ಬಹುಮಾನ ನಿಧಿಶ್ ಜೆ ನಾಯಕ್ ಪಡೆದರು.
ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ದ್ವಿತಿ ಎಸ್, ದ್ವಿತೀಯ ಬಹುಮಾನ ಕೃಷ್ಣಪ್ರಸಾದ್ ಭಟ್ ಹಾಗೆ ತೃತೀಯ ಬಹುಮಾನ ಪರೀಕ್ಷಿತ ಆಚಾರ್ಯ ಪಡೆದರು.
ತೀರ್ಪುಗಾರರಾಗಿ ಭಾಗ್ಯಶ್ರೀ ಐತಾಳ್ , ಜೂಲಿಯಸ್ ಲೂಯಿಸ್ ,ಮಹೇಂದ್ರ ಆಚಾರ್ಯ, ಶ್ರೀನಾಥ್ ಮಣಿಪಾಲ ಸಹಕರಿಸಿದರು. ನಿರೂಪಣೆ ನಾಗರತ್ನ ಜಿ ಹೇರ್ಳೆ ನೆರವೇರಿಸಿದರು.