ಉಡುಪಿಯಲ್ಲಿ ತಲವಾರು ದಾಳಿ ಪ್ರಕರಣ: ದೂರುದಾರನ ಮನೆಯಲ್ಲೇ ತಲವಾರು ಪತ್ತೆ!
ಉಡುಪಿ, ಜೂ.22: ಕೆಲ ದಿನಗಳ ಹಿಂದೆ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದ ದೂರುದಾರನ ಮನೆಯಿಂದಲೇ ಪೊಲೀಸರು ತಲವಾರು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೆಲೂನಿನಲ್ಲಿ ಕೆಲಸ ಮಾಡಿಕೊಂಡಿದ್ದ ಪುತ್ತೂರು ಗ್ರಾಮದ ಚರಣ್ ರಾಜ್(18) ಎಂಬಾತನ ಮನೆಯಲ್ಲಿ ತಲವಾರು ಇರುವ ಬಗ್ಗೆ ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ ರಿಗೆ ಮಾಹಿತಿ ಬಂದಿದ್ದು, ಅದರಂತೆ ಜೂ.21ರಂದು ನ್ಯಾಯಾಲಯದಿಂದ ಶೋಧನಾ ವಾರೆಂಟನ್ನು ಪಡೆದುಕೊಂಡು ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು.
ಈ ವೇಳೆ ಆತನ ಮನೆಯಲ್ಲಿ ತಲವಾರು ದೊರೆತಿದ್ದು, ಅದರಂತೆ ಆತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂ.15ರಂದು ಪ್ರವೀಣ್, ಅಭಿಷೇಕ್, ದೇಶರಾಜ್ ಮತ್ತು ಇತರರು ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ದಾಳಿ ಮಾಡಿ ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿದ್ದರೆಂದು ಚರಣ್‌ರಾಜ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದನು.