ಪಿ.ಎಂ.ವಿಶ್ವಕರ್ಮ ಯೋಜನೆ: ನೋಂದಣಿಗೆ ಸೂಚನೆ
ಉಡುಪಿ, ಜೂ.22: ಕೇಂದ್ರ ಸರಕಾರವು ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಡಗಿತನ/ ಮರಗೆಲಸ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಕಮ್ಮಾರಿಕೆ, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಬೀಗ ತಯಾರಕರು, ಆಭರಣ ತಯಾರಿಕೆ, ಕುಂಬಾರಿಕೆ, ಶಿಲ್ಪಿ, ಪಾದರಕ್ಷೆ ತಯಾರಿಕೆ /ಚರ್ಮಗಾರಿಕೆ, ಗಾರೆ ಕೆಲಸದವರು / ಕಲ್ಲು ಕುಟ್ಟಿಗ, ಬುಟ್ಟಿ / ಚಾಪೆ / ಕಸಪೊರಕೆ ತಯಾರಕರು / ತೆಂಗಿನ ನಾರಿನ ಕೆಲಸಗಾರರು, ಗೊಂಬೆ/ಆಟಿಕೆ ತಯಾರಕರು, ಕ್ಷೌರಿಕ, ಹೂ-ಮಾಲೆ ತಯಾರಕರು, ಅಗಸರು, ಟೈಲರ್, ಮೀನಿನ ಬಲೆಗಳನ್ನು ನೇಯ್ಗೆ ಮಾಡುವವರು ಮುಂತಾದ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಜಿಲ್ಲೆಯಲ್ಲಿ ಸುಮಾರು 13,500 ವಿವಿಧ ಕುಶಲ ಕರ್ಮಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೂ ನೋಂದಣಿ ಮಾಡದೇ ಇರುವ ಕುಶಲಕರ್ಮಿಗಳೂ ಸಹಾ ನೋಂದಣಿ ಇದೀಗ ಮಾಡಿಕೊಳ್ಳಬಹುದಾಗಿದೆ.
ಮೇಲ್ಕಂಡ ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿ ಯಾಗಿರುವ, 18 ವಷರ್ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರುವವರು ಕಳೆದ 5 ವರ್ಷಗಳಲ್ಲಿ ಸ್ವಯಂ ಉದ್ಯೋಗ / ವ್ಯಾಪಾರ ಅಭಿವೃದ್ಧಿಗಾಗಿ ಕ್ರೆಡಿಟ್ ಆಧಾರಿತ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು. ಆದಾಗ್ಯೂ ತಮ್ಮ ಸಾಲವನ್ನು ಮರುಪಾವತಿ ಮಾಡಿದ ಮುದ್ರಾ ಮತ್ತು ಪಿ.ಎಂ ಸ್ವನಿಧಿಯ ಫಲಾನುಭವಿಗಳು ಪಿ.ಎಂ ವಿಶ್ವಕರ್ಮ ಯೋಜನೆ ಯಡಿಯಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೋಂದಣಿಗೆ ಅರ್ಹರಾಗಿದ್ದು, ಕುಟುಂಬದಲ್ಲಿ ಯಾವುದೇ ಸದಸ್ಯರು ಸರಕಾರಿ ಉದ್ಯೋಗದಲ್ಲಿರಬಾರದು.
ಕುಶಲಕರ್ಮಿಗಳು ಸಂಬಂಧಿಸಿದ ಗ್ರಾಮ ಪಂಚಾಯತ್ / ನಗರಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೌಲಭ್ಯ ಕೇಂದ್ರದಲ್ಲಿ ಮತ್ತು ಆಧಾರ ಆಧಾರಿತ ಬಯೋಮೆಟ್ರಿಕ್ ದೃಢೀಕೃತ ಪಿ.ಎಂ ವಿಶ್ವಕರ್ಮ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ (ಆಧಾರ್ ಲಿಂಕ್ಡ್), ಬ್ಯಾಂಕ್ ಖಾತೆ ವಿವರಗಳು, ರೇಷನ್ ಕಾರ್ಡ್‌ಗಳನ್ನು ಹಾಜರು ಪಡಿಸುವುದು ಕಡ್ಡಾಯವಾಗಿರು ತ್ತದೆ. ನೊಂದಣಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ.
ನೋಂದಣಿಗೆ ಸಂಬಂಧಿಸಿದಂತೆ ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕ ಗೋವರ್ಧನ ಎಚ್. ಮೊ.ಸಂಖ್ಯೆ: 7217623877, 8217840512 ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಪ್ರಸನ್ನ ಕುಮಾರ ಮೊಬೈಲ್ ಸಂಖ್ಯೆ: 7019032011 ಇವರನ್ನು ಸಂಪರ್ಕಿಸಬಹುದು.