ಉಪ ಚುನಾವಣೆ ಸಿದ್ಧತೆ: ಕಾಂಗ್ರೆಸ್ ಉಸ್ತುವಾರಿ ಸಮಿತಿ ರಚನೆ
ಬೆಂಗಳೂರು: ಚನ್ನಪಟ್ಟಣ, ಸಂಡೂರು, ಶಿಗ್ಗಾಂವ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಮಂಗಳೂರು-ಉಡುಪಿ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗಾಗಿ ಕಾಂಗ್ರೆಸ್ ಉಸ್ತುವಾರಿ ಸಮಿತಿ ರಚಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಸಮಿತಿ ರಚಿಸಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರವನ್ನುಈ ಸಮಿತಿಗಳು ಸಿದ್ಧಪಡಿಸುತ್ತವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷರಾಗಿರುವ 9 ಸದಸ್ಯರ ಸಮಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಬಾಲಕೃಷ್ಣ, ಪಿ.ಎಂ.ನರೇಂದ್ರಸ್ವಾಮಿ, ಇಕ್ಬಾಲ್ ಹುಸೇನ್, ಎಂಎಲ್ಸಿಗಳಾದ ಪುಟ್ಟಣ್ಣ, ಎಸ್.ರವಿ, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಹಾಲಿ ಶಾಸಕ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ ನಂತರ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತ ಹಾಗೂ ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಚನ್ನಪಟ್ಟಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ: ಸಂಡೂರಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷರಾಗಿದ್ದು, ಮಯೂರ ಜಯಕುಮಾರ್ ಮತ್ತು ವಸಂತಕುಮಾರ್ ಉಸ್ತುವಾರಿ ವಹಿಸಲಿದ್ದಾರೆ. ಬಳ್ಳಾರಿ ಸಂಸದ ಇ ತುಕಾರಾಂ, ಶಾಸಕರಾದ ಬಿ ನಾಗೇಂದ್ರ, ಡಾ ಎನ್ ಟಿ ಶ್ರೀನಿವಾಸ್, ಪಿಟಿ ಪರಮೇಶ್ವರ ನಾಯ್ಕ್, ಶಿವಯೋಗಿ ಸದಸ್ಯರಾಗಿದ್ದಾರೆ. ಬಳ್ಳಾರಿಯಿಂದ ಹಾಲಿ ಶಾಸಕ ಇ ತುಕಾರಾಂ ಗೆದ್ದ ನಂತರ ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಅರಣ್ಯ ಸಚಿವ ಈಶ್ವರ ಖಂಡ್ರೆ ಸಮಿತಿ ಅಧ್ಯಕ್ಷರಾಗಿದ್ದು, ಮಯೂರು ಜಯಕುಮಾರ್ ಮತ್ತು ವಿನಯ ಕುಲಕರ್ಣಿ ಉಸ್ತುವಾರಿ ವಹಿಸಲಿದ್ದಾರೆ. ಸಚಿವರಾದ ಶಿವಾನಂದ ಪಾಟೀಲ, ಸಂತೋಷ ಲಾಡ್, ಎಂಎಲ್ಸಿ ಸಲೀಂ ಅಹ್ಮದ್, ಸಂಜೀವಕುಮಾರ ನೀರಲಗಿ, ಆನಂದ ಗಡ್ಡದೇವರಮಠ ಸದಸ್ಯರು ಇರಲಿದ್ದಾರೆ. ಹಾವೇರಿ ಲೋಕಸಭೆ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗೆದ್ದ ನಂತರ ಶಿಗ್ಗಾಂವ್‌ಗೆ ಉಪಚುನಾವಣೆ ನಡೆಯಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಮಾರ್ ಸೊರಕೆ, ರಮಾನಾಥ ರೈ, ಶಾಸಕ ಅಶೋಕ್ ರೈ, ಕೆ. ಜಯಪ್ರಕಾಶ್ ಹೆಗ್ಡೆ, ಪದ್ಮರಾಜ್, ಹರೀಶ್ ಕುಮಾರ್, ಉದಯ ಶೆಟ್ಟಿ, ಕಿಶನ್ ಹೆಗ್ಡೆ ಸದಸ್ಯರಾಗಿದ್ದಾರೆ. ರೋಜಿ ಜಾನ್ ಮತ್ತು ಮಂಜುನಾಥ್ ಭಂಡಾರಿ ಉಸ್ತುವಾರಿ ವಹಿಸಲಿದ್ದಾರೆ.