ಡಿಡಿಪಿಐ ಮತ್ತು ಬಿಇಒ ಅಮಾನತ್ತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಜೂ. 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10ನೇ ಸ್ಥಾನದಿಂದ 27 ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದು, ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಎಸ್‌ಎಸ್‌ಸ್ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಿಲಿತಾಂಶ ಪ್ರಮಾಣ ಕುಸಿದಿರುವುದಕ್ಕೆ ನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪಡೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು.
ಈ ಬಾರಿ ಶೇ20 ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಪ್ರಶ್ನಿಸಿದರು. ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಡಿಡಿಪಿಐ ಮತ್ತು ಬಿಇಒ ಅಮಾನತ್ತಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. 10 ರಿಂದ 27ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಸಿಎಂ ಪ್ರಶ್ನೆ ಮಾಡಿದರು. ಜೊತೆಗೆ ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.