ಲೋಕಾಯುಕ್ತ ದಾಳಿ: ಬೈಂದೂರು ಉಪವಲಯ ಅರಣ್ಯಾಧಿಕಾರಿ ಬಂಧನ- ಮತ್ತೊಬ್ಬ ನಾಪತ್ತೆ

ಬೈಂದೂರು, ಜೂ 21 :‌ ಪಟ್ಟಾ ಸ್ಥಳದಲ್ಲಿದ್ದ ಹಲಸಿನ ಮರ ಕಡಿಯಲು ಪರವಾನಿಗೆಗೆ ಲಂಚದ ಬೇಡಿಕೆಯಿಟ್ಟ ಆರೋಪಿಗಳನ್ನು ಲೋಕಾಯುಕ್ತರು ತಮ್ಮ ಬಲೆಗೆ ಬೀಳಿಸಿದ್ದಾರೆ.

ಬೈಂದೂರು ವಲಯ ಉಪವಲಯ ಅರಣ್ಯಾಧಿಕಾರಿ ಬಂಗಾರಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾದರೆ ಅರಣ್ಯ ವೀಕ್ಷಕ ವಿನಾಯಕ ತಪ್ಪಿಸಿಕೊಂಡಾತ. ಬೈಂದೂರು ತಾಲೂಕಿನ ಶಿರೂರು ನಿವಾಸಿ ಮಹಮ್ಮದ್ ಅನ್ವರ್ ಹಸನ್ ಎಂಬುವರ ಪಟ್ಟಾ ಸ್ಥಳದಲ್ಲಿದ್ದ ಹಲಸಿನ ಮರವನ್ನು ತೆರವು ಗೊಳಿಸಲು ಅರಣ್ಯಇಲಾಖೆಯಿಂದ ಅನುಮತಿ ನೀಡುವ ಬಗ್ಗೆ ಆರೋಪಿಗಳಿಗೆ ಅರ್ಜಿ ನೀಡಿದ್ದರು. ಈ ಸಂಬಂಧ ಪರವಾನಿಗೆ ನೀಡಲು ನಾಲ್ಕು ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮಹಮ್ಮದ್ ಅನ್ವರ್ ಹಸನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಆರೋಪಿ ಬಂಗಾರಪ್ಪನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ನಟರಾಜ್ ಎಂ.ಎ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆ.ಸಿ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಮಲ್ಲಿಕಾ, ಪುಷ್ಪಾವತಿ, ಸತೀಶ್ ಹಂದಾಡಿ, ರವೀಂದ್ರ ಗಾಣಿಗ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್ ಹಾಗೂ ಸುಧೀರ್ ಇವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!