ಅಬುದಾಬಿಯಲ್ಲಿ ಶಿರ್ವ ನಿವಾಸಿ ಹೃದಯಘಾತದಿಂದ ಸಾವು
ಶಿರ್ವ (ಉಡುಪಿ ಟೈಮ್ಸ್ ವರದಿ): ಕಳೆದ ಹಲವು ವರ್ಷಗಳಿಂದ ಅಬುದಾಬಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದ ಉಡುಪಿಯ ಶಿರ್ವ ನಿವಾಸಿ ಶರನ್ ದೊಮಿನಿಕ್ ಡಿಸೋಜ (57) ಹೃದಯಾಘಾತದಿಂದ ಜೂ. 20 ರಂದು ಸಾವನ್ನಪ್ಪಿದ್ದಾರೆ.
ಶಿರ್ವ ಆರೋಗ್ಯ ಮಾತೆ ದೇವಾಲಯದ ಬಳಿಯ ಬ್ಲೋಸ್ಸಮ್ ಮೆನ್ಷನ್ ಇಲ್ಲಿಯ ದಿ. ಚಾರ್ಲ್ಸ್ ಮತ್ತು ದಿ. ಸೆಲೆಸ್ಥಿನ್ ಡಿಸೋಜರವರ 12 ಮಕ್ಕಳಲ್ಲಿ ಕೊನೆಯವರಾಗಿದ್ದ ಶರನ್ ಡಿಸೋಜಾ ಪ್ರತಿಭಾವಂತರಾಗಿದ್ದು, ಕಳೆದ ಹಲವು ವರ್ಷಗಳಿಂದ ಅಬುಧಬಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಪತ್ನಿ ಎಲ್ವೀರಾ, ಮಕ್ಕಳಾದ ಸೆಲ್ವಿನ್ ಮತ್ತು ಶೆರ್ಲಿನ್ ಜೊತೆ ವಾಸವಾಗಿದ್ದರು.
ಶರನ್ ದೊಮಿನಿಕ್ ಡಿಸೋಜಾ, ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಅನಿಲ್ ಡಿಸೋಜಾ, ಶಿರ್ವ ಆರೋಗ್ಯ ಮಾತೆ ದೇವಾಲಯದ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷ ಅರ್ವಿನ್ ಡಿಸೋಜಾ ಸಹಿತ ಏಳು ಸಹೋದರರು, ಐದು ಸಹೋದರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರು ಅಬುದಾಬಿಯಲ್ಲಿ ಉದ್ಯೋಗದಲ್ಲಿದ್ದರೂ ಪ್ರತಿಷ್ಠಿತ ಉಸ್ವಾಸ್ ದುಬೈ ಮತ್ತು ಕೆಸಿಡಬ್ಲ್ಯೂ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಶರನ್ ಡಿಸೋಜರವರ ಮೃತದೇಹವು ಆದಿತ್ಯವಾರ ಅಥವಾ ಸೋಮವಾರ ಮಂಗಳೂರಿಗೆ ತಲುಪಲಿದ್ದು, ಅಂತ್ಯಕ್ರಿಯೆಯು ಬಹುತೇಕ ಮಂಗಳವಾರ ಶಿರ್ವದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.